ಅಪ್ರಾಪ್ತರ ಹೆಸರಿಗೆ ವಿಲ್ ಮೂಲಕ ವರ್ಗಾವಣೆ ಮಾಡಲಾಗಿದ್ದ ಆಸ್ತಿ ಮಾರಾಟಕ್ಕೆ ಅನುಮತಿ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸಂಬಂಧಿಕರು ಮಕ್ಕಳ ಹೆಸರಿಗೆ ವಿಲ್ ಮೂಲಕ ವರ್ಗಾವಣೆ ಮಾಡಿರುವ ಆಸ್ತಿ ಮಾರಾಟಕ್ಕೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಶಿಕ್ಷಣೆ ಕೊಡಿಸಲು ಅವರ ಹೆಸರಿಗೆ ವಿಲ್ ಮೂಲಕ ಬಂದಿರುವ ಆಸ್ತಿ ಮಾರಾಟಕ್ಕೆ ಅನುಮತಿ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಶೈಕ್ಷಣಿಕ ವೆಚ್ಚವೆಷ್ಟು, ಆಸ್ತಿ ಮೌಲ್ಯವೆಷ್ಟು ಎಂಬ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ.
ಇನ್ನು ಸಂಬಂಧಿಕರು ವಿಲ್ ಮೂಲಕ ಆಸ್ತಿ ವರ್ಗಾವಣೆ ಮಾಡುವಾಗ ಅದರ ಉತ್ತರಾಧಿಕಾರವನ್ನು ಮಕ್ಕಳಿಗೂ, ಬಳಿಕ ಅವರಿಗೆ ಹುಟ್ಟಲಿರುವ ಮಕ್ಕಳಿಗೂ ನೀಡಿದ್ದಾರೆ. ಹೀಗಾಗಿ ಸಂಪೂರ್ಣ ಒಡೆತನ ಅರ್ಜಿದಾರ ಮಕ್ಕಳಿಗಿಲ್ಲ. ಅವರಿಗೆ ಹುಟ್ಟಲಿರುವ ಮಕ್ಕಳಿಗೂ ಆಸ್ತಿಯ ಹಕ್ಕು ಸೇರಿದೆ. ಹೀಗಾಗಿ ಆಸ್ತಿ ಮಾರಾಟ ಮಾಡಲು ಕೋರಿ ಸಲ್ಲಿಸಿರುವ ಅರ್ಜಿ ಪುರಸ್ಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಮನವಿ ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಲಕ್ಷ್ಮಯ್ಯ ಎಂಬುವರು ತಮಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ತಮ್ಮ ಎರಡು ಮನೆಗಳನ್ನು ಸೋದರ ನಾಗರಾಜು ಅವರ ಮಕ್ಕಳಿಗೆ ವಿಲ್ ಮೂಲಕ ನೀಡಿದ್ದರು. ಇವರು ಪ್ರಾಪ್ತರಾದ ನಂತರ ಇವರ ಹೆಸರಿಗೆ ನೋಂದಣಿ ಮಾಡುವಂತೆಯೂ, ನಂತರ ಈ ಆಸ್ತಿ ಇವರ ಮಕ್ಕಳಿಗೂ ಸೇರಬೇಕೆಂದು ವಿಲ್ ನಲ್ಲಿ ಷರತ್ತು ವಿಧಿಸಿದ್ದರು.
ನಾಗರಾಜು ಅವರ ಮಕ್ಕಳು ಇತ್ತೀಚೆಗೆ ನಗರದ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ಅವಶ್ಯಕತೆ ಇದ್ದು, ಆಸ್ತಿ ಮಾರಾಟ ಮಾಡಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಮನವಿಯನ್ನು ಸಿವಿಲ್ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
