Law

ಅವ್ಯವಹಾರ: ಸರ್ಕಾರಿ ನೌಕರನಿಗೆ 1 ದಿನದ ಶಿಕ್ಷೆ ವಿಧಿಸಿದ ಹೈಕೋರ್ಟ್

Share It

ವಿಧವಾ ವೇತನಕ್ಕೆ ಸಂಬಂಧಿಸಿದ ಅವ್ಯವಹಾರ ಪ್ರಕರಣದಲ್ಲಿ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಿವೃತ್ತ ಸರ್ಕಾರಿ ನೌಕರನ ಶಿಕ್ಷೆಯನ್ನು ಹೈಕೋರ್ಟ್ 1 ದಿನಕ್ಕೆ ಇಳಿಸಿ ಆದೇಶಿಸಿದೆ.

ಹಣಕಾಸು ಅವ್ಯವಹಾರ ಆರೋಪದಡಿ ಕೆ.ಆರ್ ಪೇಟೆ ಜೆಎಂಎಫ್ ಸಿ ಕೋರ್ಟ್ ವಿಧಿಸಿರುವ 1 ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ನಿವೃತ್ತ ಸರ್ಕಾರಿ ನೌಕರ ಹನುಮಂತರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: 1987 ರಲ್ಲಿ ವಿಧವಾ ವೇತನ ಹಂಚಿಕೆಯಲ್ಲಿ 54,200 ರೂಪಾಯಿ ಅವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹನುಮಂತರಾವ್ ವಿರುದ್ಧ ಖಜಾನೆ ಅಧಿಕಾರಿಗಳು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಕೆ.ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 409 ಹಾಗೂ 477ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಲೆಕ್ಕ ಪರಿಶೋಧನೆಯಲ್ಲೂ ಅವ್ಯವಹಾರ ಸ್ಪಷ್ಟವಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಸ್ಥಳೀಯ ಜೆಎಂಎಫ್ಸಿ ಕೋರ್ಟ್ ಹನುಮಂತರಾವ್ ಗೆ 1 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ದಂಡ ವಿಧಿಸಿತ್ತು. ಸೆಷನ್ಸ್ ಕೋರ್ಟ್ ಕೂಡ ಶಿಕ್ಷೆಯನ್ನು ರದ್ದುಪಡಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ತೀರ್ಪು: ಅಪರಾಧ ನಡೆದು 36 ವರ್ಷಗಳಾಗಿವೆ. ಅವ್ಯವಹಾರ ಎಸಗಿದ್ದಾರೆ ಎನ್ನಲಾದ ಮೊತ್ತವನ್ನು ಅರ್ಜಿದಾರರ ವೇತನದಿಂದ ಆಗಲೇ ಕಡಿತ ಮಾಡಿಕೊಳ್ಳಲಾಗಿದೆ. ಹನುಮಂತರಾವ್ ಗೆ 80 ವರ್ಷ ವಯಸ್ಸಾಗಿದ್ದು ವಯೋ ಸಹಜ ಖಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಅರ್ಜಿದಾರರು ಈ ಪ್ರಕರಣ ಹೊರತುಪಡಿಸಿ ಬೇರಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಹೀಗಾಗಿ ಅರ್ಜಿದಾರರಿಗೆ ವಿಧಿಸಿರುವ ಶಿಕ್ಷೆಯನ್ನು ಮಾರ್ಪಾಟು ಮಾಡುಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಶಿಕ್ಷೆಯನ್ನು 1 ವರ್ಷದ ಬದಲಿಗೆ 1 ದಿನಕ್ಕೆ ಇಳಿಸಿರುವ ಹೈಕೋರ್ಟ್, ಐಪಿಸಿ ಸೆಕ್ಷನ್ 409 ಹಾಗೂ 477 ಅಪರಾಧಕ್ಕೆ ತಲಾ 10 ಸಾವಿರ ದಂಡ ಪಾವತಿಸುವಂತೆ ಆದೇಶಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಜೈಲು ಶಿಕ್ಷೆಗೆ ಒಳಗಾಗುವಂತೆ ತೀರ್ಪು ನೀಡಿದೆ.

(CRL.RP No. 856 of 2014)


Share It

You cannot copy content of this page