News

ಮುರುಘಾ ಶರಣರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ಬಾಲಕಿಯರು

Share It

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು, ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಹಾಗೂ ಮಠದ ಎ.ಜೆ. ಪರಮಶಿವಯ್ಯ ವಿರುದ್ಧ ಅಪ್ರಾಪ್ತ ಸಂತ್ರಸ್ತೆಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಆರೋಪಿತರನ್ನು ಖುಲಾಸೆಗೊಳಿಸಿರುವ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ವಿಚಾರಣೆಗೆ ನಿಗದಿಯಾಗಬೇಕಿದೆ.

ಮೇಲ್ಮನವಿ ಅರ್ಜಿಯಲ್ಲಿ, ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಮುರುಘಾ ಶರಣರು ಸೇರಿದಂತೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿರುವ ಆದೇಶ ಸೂಕ್ತವಾಗಿಲ್ಲ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ (ಪೋಕ್ಸೊ) ಕಾನೂನುಗಳು ಮತ್ತು ಸುಪ್ರೀಂ ಕೋರ್ಟ್‌ ವಿಧಿಸಿರುವ ಚೌಕಟ್ಟು ಪಾಲನೆ ಆಗಿಲ್ಲ. ನಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದೆವು. ಸ್ವಾಮೀಜಿ ಖಾಸಗಿ ಕೋಣೆಗೆ ಹಿಂದಿನ ಬಾಗಿಲಿದ್ದು, ಆ ಬಗ್ಗೆ ಸ್ವತಃ ಸ್ಥಳ ಪರಿಶೀಲನೆಗೆ ಮನವಿ ಮಾಡಿದ್ದೆವು. ನಮ್ಮ ಹೇಳಿಕೆ ಮತ್ತು ಈ ಮನವಿಯನ್ನು ಸೆಷನ್ಸ್‌ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಸಂತ್ರಸ್ತೆಯರು ಆಕ್ಷೇಪಿಸಿದ್ದಾರೆ.

ಅಲ್ಲದೇ, ಆರೋಪಿತರ ಕೃತ್ಯದ ಬಗ್ಗೆ ನಾವು ನಮ್ಮ ತಂದೆ-ತಾಯಿ, ಸ್ನೇಹಿತೆಯರಿಗೆ ತಿಳಿಸಿಲ್ಲ. ಹೀಗಾಗಿ ಸಂತ್ರಸ್ತೆಯರು ಮಾಡಿರುವ ಆರೋಪಗಳು ನಂಬಲಸಾಧ್ಯ ಮತ್ತು ಅಸಹಜವೆಂದು ವ್ಯಾಖ್ಯಾನಿಸಿರುವ ನ್ಯಾಯಾಲಯದ ಕ್ರಮ ಸರಿಯಲ್ಲ. ತಾವು ತಂಗಿದ್ದ ಹಾಸ್ಟೆಲ್‌ನಲ್ಲಿ 13 ವಿದ್ಯಾರ್ಥಿನಿಯರಿದ್ದರು. ಅದರಲ್ಲಿ ಕೇವಲ ನಾಲ್ವರು ವಿದ್ಯಾರ್ಥಿನಿಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೇವಲ ಪ್ರತಿಕೂಲ ಸಾಕ್ಷಿಗಳನ್ನೇ ಪರಿಗಣಿಸಿ ಘಟನೆ ನಡೆದಿಲ್ಲ ಎಂದು ಸೆಷನ್ಸ್‌ ಕೋರ್ಟ್‌ ತೀರ್ಮಾನಿಸಿದೆ. ಸುಳ್ಳು ಆರೋಪ ಹೊರಿಸುವುದರಿಂದ ನಮಗೆ ಲಾಭವಿಲ್ಲ ಎಂಬ ವಾದಾಂಶವನ್ನು ಸಹ ಪರಿಗಣಿಸಿಲ್ಲ. ಸ್ವಾಮೀಜಿ ಬಗ್ಗೆ ಎಸ್.ಕೆ. ಬಸವರಾಜನ್ ಗೆ ವೈಷಮ್ಯವಿತ್ತು ಎಂದು ವ್ಯಾಖ್ಯಾನಿಸಿರುವುದು ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಮುರುಘಾ ಶರಣರು ಸೇರಿದಂತೆ ಪ್ರಕರಣದ ಎಲ್ಲಾ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಆರೋಪಿಗಳನ್ನು ದೋಷಿಗಳಾಗಿ ಪರಿಗಣಿಸಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಎಂದು ಮೇಲ್ಮನವಿದಾರ ಸಂತ್ರಸ್ತೆಯರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: 2022ರ ಆ.26ರಂದು ಇಬ್ಬರು ಸಂತ್ರಸ್ತ ಬಾಲಕಿಯರು ಪೊಲೀಸ್‌ ಠಾಣೆಗೆ ದೂರು ನೀಡಿ, ಮುರುಘಾ ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ನಂತರ ಪೊಲೀಸರು ಶರಣರನ್ನು 2022ರ ಸೆ.1ರಂದು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್‌ ನ್ಯಾಯಾಲಯ 2025ರ ನ.26ರಂದು ಆರೋಪಿತರಾದ ಮುರುಘಾ ಶರಣರು, ರಶ್ಮಿ ಹಾಗೂ ಮಠದ ಎ. ಜೆ. ಪರಮಶಿವಯ್ಯ ಅವರನ್ನು ಖುಲಾಸೆಗೊಳಿಸಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತರು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಮುರುಘಾ ಶರಣರ ವಿರುದ್ಧ ಮತ್ತಿಬ್ಬರು ಬಾಲಕಿಯರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಿದ್ದು, ಆ ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿ ಇವೆ.


Share It

You cannot copy content of this page