ಮನೆ ಬಿಟ್ಟು ಹೋಗಿ ಅಂತರ್ಜಾತಿ ವಿವಾಹವಾಗಿದ್ದ ಮಗಳು ಗರ್ಭಿಣಿಯಾದ ನಂತರ ಗ್ರಾಮಕ್ಕೆ ಮರಳಿದ ವೇಳೆ ಪೋಷಕರು ಹಲ್ಲೆ ಮಾಡಿದ್ದು, ಆಕೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅಂತರ್ಜಾತಿ ವಿವಾಹಕ್ಕೆ ಕೋಪಗೊಂಡು ತನ್ನ ಮಗಳ ಮೇಲೆಯೇ ತಂದೆ ಹಲ್ಲೆ ನಡೆಸಿದ್ದು, ಗರ್ಭಿಣಿಯಾಗಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಭಾನುವಾರ ಸಂಜೆ ನಡೆದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪೈಪ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಹಲ್ಲೆ ನಡೆಸಲಾಗಿದ್ದು, ಸುಮಾರು 20 ವರ್ಷ ವಯಸ್ಸಿನ ಮಹಿಳೆ ಭಾನುವಾರ ರಾತ್ರಿ ಸಾವಿಗೀಡಾಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಇನಾಂ-ವೀರಾಪುರದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಮೃತ ಮಹಿಳೆ ಮೇ ತಿಂಗಳಲ್ಲಿ ತನ್ನ ಕುಟುಂಬದ ವಿರೋಧದ ಹೊರತಾಗಿಯೂ, ತನ್ನ ಗ್ರಾಮದ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದರು. ನವ ದಂಪತಿ ಜೀವ ಭಯದಿಂದ ಹಾವೇರಿಯಲ್ಲಿ ವಾಸಿಸುತ್ತಿದ್ದರು. ಪತ್ನಿ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಅವರು ಈ ತಿಂಗಳ ಆರಂಭದಲ್ಲಿ ಗ್ರಾಮಕ್ಕೆ ಮರಳಿದ್ದರು.
