ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಸಂತ್ರಸ್ತೆ ಮತ್ತು ಆರೋಪಿ ವಿವಾಹ ಆಗುವುದನ್ನು ಪರಿಗಣಿಸಿದ ಹೈಕೋರ್ಟ್ ಆರೋಪಿ ವಿರುದ್ಧ ಪೊಲೀಸರು ದಾಖಲಿಸಿದ್ದ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಿದೆ.
ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಮನವಿ ಹಾಗೂ ಆರೋಪಿಯನ್ನು ವಿವಾಹವಾಗುವುದಾಗಿ ತಿಳಿಸಿ ಸಂತ್ರಸ್ತೆ ಸಲ್ಲಿಸಿದ್ದ ಪ್ರಮಾಣಪತ್ರ ಪರಿಗಣಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ವೈದ್ಯಕೀಯ ದಾಖಲೆಗಳು ಸಂತ್ರಸ್ತೆ ಅಪ್ರಾಪ್ತೆಯಾಗಿದ್ದ ಸಂದರ್ಭದಲ್ಲಿ ದೈಹಿಕ ಸಂಪರ್ಕಕ್ಕೆ ಒಳಗಾಗಿರುವುದನ್ನು ಸ್ಪಷ್ಟಪಡಿಸುತ್ತವೆ. ಇದೀಗ ವಯಸ್ಕಳಾಗಿರುವ ಸಂತ್ರಸ್ತೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಾನು ಆರೋಪಿಯೊಂದಿಗೆ ಪ್ರೀತಿಯಲ್ಲಿ ಇರುವುದಾಗಿ ಮತ್ತು ಆತನನ್ನು ವಿವಾಹವಾಗುವುದಾಗಿ ಹೇಳಿದ್ದಾರೆ. ಅಂತೆಯೇ ಆರೋಪಿಯೂ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದಾನೆ.
ವಿಚಾರಣಾ ನ್ಯಾಯಾಲಯದಲ್ಲಿ ಸಂತ್ರಸ್ತೆ ಆರೋಪಿ ವಿರುದ್ಧ ಯಾವುದೇ ಸಾಕ್ಷ್ಯ ನುಡಿದಿಲ್ಲ. ಹೀಗಿದ್ದಾಗ ಕಾನೂನು ಪ್ರಕ್ರಿಯೆಯನ್ನು ಮುಂದುವರೆಯಲು ಅವಕಾಶ ನೀಡಿದರೆ ಸಂತ್ರಸ್ತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಆರೋಪಿ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಇದೇ ವೇಳೆ ಆರೋಪಿ ಸಂತ್ರಸ್ತೆಯನ್ನು 1 ತಿಂಗಳ ಒಳಗೆ ವಿವಾಹವಾಗಬೇಕು ಮತ್ತು ವಿವಾಹವನ್ನು ಸಕ್ಷಮ ಪ್ರಾಧಿಕಾರದ ಮುಂದೆ ನೋಂದಾಯಿಸಬೇಕು ಎಂದು ಷರತ್ತು ವಿಧಿಸಿ ಕೇಸ್ ರದ್ದುಪಡಿಸಿದೆ.
ಹಿನ್ನೆಲೆ: ಆರೋಪಿತ ವ್ಯಕ್ತಿ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(ಎನ್) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 6 ರ ಅಡಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಪ್ರಕರಣವನ್ನು ಚಿಕ್ಕಬಳ್ಳಾಪುರದ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ತನ್ನ ವಿರುದ್ಧದ ಪ್ರಕರಣನ್ನು ರದ್ದುಪಡಿಸುವಂತೆ ಕೋರಿ ಸಿ.ಆರ್.ಪಿ.ಸಿ. ಸೆಕ್ಷನ್ 482 ಅಡಿ ಅರ್ಜಿ ಸಲ್ಲಿಸಿದ್ದ.
ವಿಚಾರಣೆ ವೇಳೆ ಅರೋಪಿ ತಾನು ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದು, ಸಮ್ಮತಿಯ ಸಂಬಂಧವಿದ್ದದನ್ನು ಒಪ್ಪಿಕೊಂಡಿದ್ದ ಮತ್ತು ತಾನು ಸಂತ್ರಸ್ತೆಯನ್ನು ವಿವಾಹವಾಗಲು ಸಿದ್ದವಿರುವುದಾಗಿ ತಿಳಿಸಿದ್ದ. ಸಂತ್ರಸ್ತೆ ಕೂಡ ತಾನು ಆರೋಪಿಯನ್ನು ಪ್ರೀತಿಸುತ್ತಿದ್ದು ವಿವಾಹವಾಗುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು. ಇಬ್ಬರ ಮನವಿ ಪರಿಗಣಿಸಿದ ಹೈಕೋರ್ಟ್ ಕೇಸ್ ರದ್ದುಪಡಿಸಿದೆ. ಅಲ್ಲದೇ ಆರೋಪಿ-ಸಂತ್ರಸ್ತೆ ವೈವಾಹಿಕ ಜೀವನಕ್ಕೆ ಕಾಲಿಡಲು ಅವಕಾಶ ಮಾಡಿಕೊಟ್ಟಿದೆ.
ಪ್ರೇಮ ಪ್ರಕರಣಗಳಲ್ಲಿ ಅಮಾಯಕ ಯುವಕರು ಪೋಕ್ಸೊ ಕಾಯ್ದೆಯಡಿ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಸಮ್ಮತಿಯ ಲೈಂಗಿಕ ಸಂಬಂಧದ ವಯೋಮಿತಿಯನ್ನು ಕಡಿತ ಮಾಡುವಂತೆ ಇತ್ತೀಚೆಗೆ ಕಾನೂನು ಕ್ಷೇತ್ರದ ತಜ್ಞರು ಒತ್ತಾಯಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್ ಕೂಡ ಈ ವಿಚಾರವಾಗಿ ಕೇಂದ್ರಕ್ಕೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ನ ತೀರ್ಪು ಮಹತ್ವ ಪಡೆದುಕೊಂಡಿದೆ.
(CRIMINAL PETITION NO. 7066 OF 2023)
