ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಪತಿ ತನ್ನ ಹೆಂಡತಿ ಮನೆ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸಿದರೆ ಅದನ್ನು ಆಕೆಯ ಮೇಲಿನ ಕ್ರೌರ್ಯ ಎಂದು ಕರೆಯಲಾಗದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಇದೇ ವೇಳೆ ವಿವಾಹಿತ ಮಹಿಳೆಗೆ ಮನೆ ಕೆಲಸ ಮಾಡಲು ಕೇಳಿದರೆ, ಅದನ್ನು ಸೇವಕಿ ಅಥವಾ ಮನೆ ಕೆಲಸದ ಮಹಿಳೆಯ ಕೆಲಸಕ್ಕೆ ಹೋಲಿಸಲು ಬರುವುದಿಲ್ಲ. ಅದನ್ನು ಆಕೆಯ ಕುಟುಂಬದ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ ಎಂದು ಮಾತ್ರ ಪರಿಗಣಿಸಬೇಕು ಎಂದು ನ್ಯಾ. ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಪೀಠ ತನ್ನ ತೀರ್ಪಿನಲ್ಲಿ, ವಿವಾಹದ ಮೂಲಕ ದಾಂಪತ್ಯಕ್ಕೆ ಕಾಲಿಡುವ ಗಂಡ ಹೆಂಡತಿ, ಭವಿಷ್ಯದ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ವಿವಾಹಿತ ಮಹಿಳೆಯನ್ನು ಮನೆ ಕೆಲಸ ಮಾಡಲು ಕೇಳಿದರೆ, ಅದನ್ನು ಸೇವಕಿ ಕೆಲಸಕ್ಕೆ ಹೋಲಿಸಲಾಗುವುದಿಲ್ಲ. ಅದನ್ನು ಆಕೆಯ ಕುಟುಂಬದ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ ಎಂದು ಪರಿಗಣಿಸಬೇಕು ಎಂದು ಈಗಾಗಲೇ ಹಲವು ಪ್ರಕರಣಗಳಲ್ಲಿ ತೀರ್ಮಾನಿಸಲಾಗಿದೆ. ಪತಿ ಹಣಕಾಸಿನ ಜವಾಬ್ದಾರಿಗಳನ್ನು ತೆಗೆದುಕೊಂಡಾಗ ಹೆಂಡತಿ ಮನೆಯ ಜವಾಬ್ದಾರಿಯನ್ನು ಸ್ವೀಕರಿಸುತ್ತಾಳೆ.
ಆದರೆ ಪ್ರಸ್ತುತ ಪ್ರಕರಣದಲ್ಲಿ ಪತ್ನಿಯು ಪತಿಯ ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಪ್ರಯತ್ನ ಮಾಡಿಲ್ಲ. ಆರಾಮವಾಗಿರಲು ಮತ್ತು ತನ್ನ ಹೆತ್ತವರೊಂದಿಗೆ ವಾಸಿಸಲು ಆಗಾಗ್ಗೆ ತನ್ನ ವೈವಾಹಿಕ ಮನೆಯನ್ನು ಬಿಟ್ಟು ಹೋಗುತ್ತಿರುವುದು ಕಾಣುತ್ತದೆ. ಇದನ್ನು ತಪ್ಪಿಸಲು ಪತಿ ಪ್ರತ್ಯೇಕ ಮನೆ ಮಾಡಿ ಹೆಂಡತಿಯನ್ನು ಸಂತೋಷವಾಗಿಡಲು ಪ್ರಯತ್ನಿಸಿದ್ದಾರೆ.
ಇದರ ಹೊರತಾಗಿಯೂ, ಪತ್ನಿ ತನ್ನ ಹೆತ್ತವರೊಂದಿಗೆ ಇರಲು ನಿರ್ಧರಿಸಿ, ವೈವಾಹಿಕ ಕಟ್ಟುಪಾಡುಗಳನ್ನು ನಿರ್ಲಕ್ಷಿಸಿದ್ದಾರೆ. ಜತೆಗೆ ಮಗನನ್ನು ಪತಿಯಿಂದ ದೂರವಿಡುವ ಮೂಲಕ ತಂದೆಗೆ ಸಿಗಬೇಕಿದ್ದ ಸಂತೋಷ ಕಸಿದುಕೊಂಡಿದ್ದಾರೆ. ಇನ್ನು ದಾಂಪತ್ಯದ ಜವಾಬ್ದಾರಿ ನಿಭಾಯಿಸುವುದು ಇಬ್ಬರ ಜವಾಬ್ದಾರಿ ಆಗಿರುತ್ತದೆ. ಹೀಗಾಗಿ ಗಂಡ ತನ್ನ ಹೆಂಡತಿಯಿಂದ ಮನೆ ಕೆಲಸ ನಿರೀಕ್ಷಿಸುವುದನ್ನು ಕ್ರೌರ್ಯ ಎಂದು ಕರೆಯಲಾಗದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 (1) (IA) ಅಡಿಯಲ್ಲಿ ಪತಿಗೆ ವಿಚ್ಛೇದನ ನೀಡಿ ಆದೇಶಿಸಿದೆ.
ಮನೆ ಕೆಲಸಗಳಲ್ಲಿ ಭಾಗಿಯಾಗದ ಹೆಂಡತಿ ತವರು ಮನೆ ಸೇರಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಹಾಗೂ ಸುಳ್ಳು ಕೇಸು ದಾಖಲಿಸುವ ಬೆದರಿಕೆ ಹಾಕಿದ್ದಾಳೆ. ಮಗನನ್ನು ಭೇಟಿ ಮಾಡಲು ಅಡ್ಡಿಪಡಿಸಿದ್ದಾಳೆ. ಹೀಗಾಗಿ ಆಕೆಯಿಂದ ವಿಚ್ಚೇದನ ಕೊಡಿಸಿ ಎಂದು ಪತಿ ನ್ಯಾಯಾಲಯದ ಮೊರೆ ಹೋಗಿದ್ದರು.
(MAT. APP (F.C) 63/2021)
