ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಅಪ್ಪನಿಂದ ಮಕ್ಕಳನ್ನು ದೂರವಿಡಲು ಪ್ರಯತ್ನಿಸುವುದು ಮತ್ತು ತಂದೆಯ ವಿರುದ್ಧ ಮಕ್ಕಳಿಗೆ ಇಲ್ಲಸಲ್ಲದ್ದು ಹೇಳಿಕೊಡುವುದು ಮಾನಸಿಕ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ತನ್ನ ಮತ್ತು ತನ್ನ ಕುಟುಂಬ ಸದಸ್ಯರ ವಿರುದ್ಧ ಹಲವು ಕ್ರಿಮಿನಲ್ ಕೇಸ್ ದಾಖಲಿಸಿರುವ ಮತ್ತು ಅಪ್ರಾಪ್ತ ಮಗಳನ್ನು ಭೇಟಿಯಾಗದಂತೆ ತಡೆಯುತ್ತಿರುವ ಪತ್ನಿಯಿಂದ ವಿಚ್ಚೇದನ ಕೊಡಿಸಬೇಕು ಎಂದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪತ್ನಿ ಎಲ್ಲೆ ಮೀರಿ ಆರೋಪಗಳನ್ನು ಮಾಡಿದ್ದಾರೆ. ತಂದೆಗೆ ಪುಟ್ಟ ಮಗಳನ್ನು ಭೇಟಿಯಾಗಲೂ ಅವಕಾಶ ನೀಡಿಲ್ಲ. ಮಗುವಿನ ಭೇಟಿಗೆ ಅವಕಾಶ ಕೋರಿ ಪತಿ ಕೋರ್ಟ್ ಮೊರೆ ಹೋಗಿದ್ದಾರೆ. ಮಗುವನ್ನು ಭೇಟಿಯಾಗಲು ಪತಿಗೆ ಅವಕಾಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಪತ್ನಿಗೆ ನಿರ್ದೇಶನ ನೀಡಿದ್ದರೂ, ಆಕೆ ಅದನ್ನು ಪಾಲಿಸಲು ನಿರಾಕರಿಸಿದ್ದಾಳೆ.
ಪ್ರಕರಣದ ಅಂಶಗಳನ್ನು ಪರಿಶೀಲಿಸಿದಾಗ, ಪತ್ನಿ ಅಪ್ರಾಪ್ತ ಮಗಳನ್ನು ತಂದೆಯಿಂದ ದೂರವಿರಿಸಲು ಪ್ರಯತ್ನಿಸಿರುವುದು ಹಾಗೂ ಮಗಳಿಗೆ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿಸಿರುವುದು ಕಾಣುತ್ತದೆ. ಮಗು ತನ್ನ ಸ್ವಂತ ತಂದೆಯ ವಿರುದ್ಧ ಮಾತಾಡುವಂತೆ ತಾಯಿ ಹೇಳಿಕೊಡುವುದು ಗಂಭೀರ ವಿಷಯವಾಗಿದೆ ಮತ್ತು ಖಂಡಿತವಾಗಿಯೂ ಪತಿಗೆ ಮಾನಸಿಕ ಕ್ರೌರ್ಯವನ್ನು ಉಂಟುಮಾಡಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಪತಿಯ ವಿಚ್ಚೇದನ ಮನವಿಯನ್ನು ಪುರಸ್ಕರಿಸಿದೆ.
ಹಿನ್ನೆಲೆ: ವಿವಾಹವಾದ ಕೆಲ ತಿಂಗಳಲ್ಲೇ ದಂಪತಿ ನಡುವೆ ವೈಮನಸ್ಯ ಮೂಡಿ ಪರಸ್ಪರ ದೂರವಾಗಿದ್ದ ದಂಪತಿಗೆ 2014 ರಲ್ಲಿ ಹೆಣ್ಣು ಮಗು ಜನಿಸಿತ್ತು. ಮಗಳನ್ನು ನೋಡಲು ಹೋದ ಪತಿಗೆ ಪತ್ನಿ ಅವಕಾಶ ನೀಡಿರಲಿಲ್ಲ. ಮಗಳ ಭೇಟಿಗೆ ಅವಕಾಶ ನೀಡದ ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ಜಬಲ್‌ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಅಪ್ರಾಪ್ತ ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಗಳು ಮತ್ತು ತಂದೆಯ ಭೇಟಿಗೆ ಅವಕಾಶ ಕಲ್ಪಿಸಲು ಮುಂದಾಗಿತ್ತು. ಈ ವೇಳೆ ಪತ್ನಿ ಮಗಳ ಭೇಟಿಗೆ ಅಸಹಕಾರ ತೋರಿದ್ದರು. ಇದರಿಂದ ಮನನೊಂದ ಪತಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚ್ಚೇದನ ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು
(F.A.No.712/2020)
