ನಿವೇಶನಕ್ಕೆ ಇ-ಖಾತಾ ಮಾಡಿಕೊಡಲು 6 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಸೊಣ್ಣಪ್ಪನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಬಿಲ್ ಕಲೆಕ್ಟರ್ ಗೆ 3 ವರ್ಷ ಜೈಲು, 1ಲಕ್ಷ ರೂಪಾಯಿ ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.
ವಿದ್ಯಾನಗರ ನಿವಾಸಿ ಆರ್.ಟಿ ಮಹೇಂದ್ರ ಅವರು ಟೆಲಿಕಾಂ ಲೇಔಟ್‌ನಲ್ಲಿ ಖರೀದಿಸಿದ್ದ ನಿವೇಶನಕ್ಕೆ ಇ ಖಾತಾ ಮಾಡಿಕೊಡಲು ಸೊಣ್ಣಪ್ಪನಹಳ್ಳಿ ಗ್ರಾಮ ಪಂಚಾಯಿತಿಗೆ 2017ರ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಬಿಲ್ ಕಲೆಕ್ಟರ್ ಆರು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರಿಂದ ಬೇಸತ್ತ ಮಹೇಂದ್ರ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಇದರನ್ವಯ ಎಸಿಬಿ ಅಧಿಕಾರಿಗಳು, 2022ರ ನವೆಂಬರ್ 24ರಂದು ಲಂಚ ಸ್ವೀಕರಿಸಿದ್ದ ಬಿಲ್ ಕಲೆಕ್ಟರ್ ಮೂರ್ತಿಯನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು ಬಿಲ್ ಕಲೆಕ್ಟರ್ ಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
