News

ಎರಡನೇ ಹೆಂಡತಿ ಮಕ್ಕಳಿಗೂ ಅನುಕಂಪದ ನೌಕರಿ ಹೈಕೋರ್ಟ್ ಮಹತ್ವದ ತೀರ್ಪು

Share It

ಎರಡನೇ ಹೆಂಡತಿ ಮಗ ಅಥವಾ ಮಗಳು, ಅಥವಾ ಅನೂರ್ಜಿತ ವಿವಾಹದಿಂದ ಜನಿಸಿದ ಮಗ ಅಥವಾ ಮಗಳು ಕೂಡ ಅನುಕಂಪದ ನೌಕರಿಗೆ ಅರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಅನುಕಂಪದ ನೌಕರಿ ಕೋರಿಕೆ ತಿರಸ್ಕರಿಸಿದ್ದ ಚಿತ್ರದುರ್ಗ ನಗರದ ಸಭೆ ಆಯುಕ್ತರ ಕ್ರಮ ಪ್ರಶ್ನಿಸಿ ಭರತ್ ಕುಮಾರ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ತಮ್ಮ ಪೋಷಕರು ಯಾರಾಗಬೇಕೆಂದು ಮಕ್ಕಳು ಆಯ್ಕೆ ಮಾಡಿರುವುದಿಲ್ಲ. ಹೀಗಾಗಿ ಮೊದಲ ಪತ್ನಿಯ ಮಕ್ಕಳಂತೆಯೇ ಎರಡನೇ ಪತ್ನಿಯ ಮಕ್ಕಳು ಕೂಡ ಕಾನೂನಾತ್ಮಕ ವಾರಸುದಾರರೇ ಆಗಿರುತ್ತಾರೆ. ಎರಡನೇ ವಿವಾಹ ಅಥವಾ ಅನೂರ್ಜಿತ ವಿವಾಹಕ್ಕೆ ಜನಿಸಿದ ಮಕ್ಕಳು ಇಂತಹ ಅನುಕಂಪದ ನೌಕರಿಗೆ ಅರ್ಹರಲ್ಲ ಎನ್ನುವುದು ಅಥವಾ ದ್ವಿಪತ್ನಿತ್ವವನ್ನು ನಿಯಂತ್ರಿಸುವ ಉದ್ದೇಶದಿಂದ ಎರಡನೇ ಹೆಂಡತಿಯ ಮಕ್ಕಳಿಗೆ ಅನುಕಂಪದ ನೌಕರಿ ನಿರಾಕರಿಸುತ್ತೇವೆ ಎಂಬುದು ಒಪ್ಪುವಂತದ್ದಲ್ಲ.”

“ಇಂತಹ ನಡೆಯು ಎರಡನೇ ಪತ್ನಿ ಅಥವಾ ಅನೂರ್ಜಿತ ವಿವಾಹದ ಮಕ್ಕಳ ಘನತೆಯ ಬದುಕಿಗೆ ಅಪಚಾರ ಮಾಡಿದಂತೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧದವಾದುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಈಗಾಗಲೇ ಹೇಳಿದೆ. ಯೂನಿಯನ್ ಆಫ್ ಇಂಡಿಯಾ ವರ್ಸಸ್ ವಿ.ಆರ್ ತ್ರಿಪಾಠಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿಯೇ ಈ ಹಿಂದೆ ಹೈಕೋರ್ಟ್ ವಿಭಾಗೀಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.” ಎಂದು ಹೈಕೋರ್ಟ್ ಹೇಳಿದೆ.

ಅಲ್ಲದೇ, ”ಪ್ರಸ್ತುತ ಪ್ರಕರಣದ ಅರ್ಜಿದಾರರಿಗೆ 2ನೇ ಹೆಂಡತಿಯ ಮಗ ಎಂಬ ಕಾರಣ ನೀಡಿ ಚಿತ್ರದುರ್ಗ ನಗರಸಭೆ ಆಯುಕ್ತರ ಅನುಂಕಪದ ನೌಕರಿ ನಿರಾಕರಿಸಿರುವುದು ಕಾನೂನು ಬಾಹಿರ. ಆದ್ದರಿಂದ ನಗರಭೆ ಆಯುಕ್ತರು ಅನುಕಂಪದ ನೌಕರಿ ನಿರಾಕರಿಸಿ ನೀಡಿರುವ ಹಿಂಬರವನ್ನು ರದ್ದುಪಡಿಸಲಾಗುತ್ತಿದೆ. ಹಾಗೆಯೇ, ಅರ್ಜಿದಾರರ ಮನವಿಯನ್ನು ಕಾನೂನು ರೀತಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ” ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರ ತಂದೆ ಚಿತ್ರದುರ್ಗದ ಹಿರಿಯೂರು ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದು, ಸೇವಾವಧಿಯಲ್ಲೇ 2019ರ ನವೆಂಬರ್ 27ರಂದು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅನುಕಂಪದ ನೌಕರಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಎರಡನೇ ಪತ್ನಿಯ ಮಗ ಎಂಬ ಕಾರಣಕ್ಕೆ ಅರ್ಜಿಯನ್ನು ಚಿತ್ರದುರ್ಗ ನಗರಸಭೆ ಆಯುಕ್ತರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದ ಸಂಖ್ಯೆ: WRIT PETITION NO. 387 OF 2024 (S-RES

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page