ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಆ ಮೂಲಕ ಪಡೆದ ಪ್ರಯೋಜನವನ್ನು ಪ್ರಶ್ನಿಸಲು ಕಾಲಮಿತಿಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್‌ನ ಕಲಬುರಗಿ ಪೀಠ ತೀರ್ಪು ನೀಡಿದೆ.
ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡು, ಬಳಿಕ ಸೇವೆಯಿಂದ ವಜಾಗೊಂಡಿದ್ದ ಡಾ.ಗುಡ್ಡದೇವ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿದರೆ, ಅವರು ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ್ದ ನಮೂನೆಯಲ್ಲಿ ತಾನು ಹಿಂದೂ ಕುರುಬ ಜಾತಿಗೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ. ಆದರೆ, ಉದ್ಯೋಗಕ್ಕೆ ಸೇರುವ ವೇಳೆಗೆ ಗೊಂಡಾ ಜಾತಿಗೆ ಸೇರಿದವರೆಂದು ಹೇಳಿದ್ದಾರೆ. ಅವರು ನಿಜಕ್ಕೂ ಪರಿಶಿಷ್ಟ ಪಂಗಡದ ಗೊಂಡಾ ಸಮುದಾಯಕ್ಕೆ ಸೇರಿದವರಾಗಿದ್ದರೆ ಕಾಲೇಜು ಸೇರುವ ವೇಳೆ ಬದಲಿ ಜಾತಿ ಏಕೆ ನಮೂದಿಸುತ್ತಿದ್ದರು ಎಂದು ಪ್ರಶ್ನಿಸಿದೆ.
ಅಲ್ಲದೇ, ಅರ್ಜಿದಾರರು ಶುದ್ಧ ಹಸ್ತದಿಂದ ನ್ಯಾಯಾಲಯದ ಮೆಟ್ಟಿಲೇರಿಲ್ಲ. ತಮ್ಮ ಪರವಾದ ಆದೇಶ ಪಡೆಯಲು ಹಲವು ಸಂಗತಿಗಳನ್ನು ಮುಚ್ಚಿಟ್ಟಿದ್ದಾರೆ. ನೇಮಕಾತಿ ಪ್ರಾಧಿಕಾರದ ಮುಂದೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಅದರ ಸಹಾಯದಿಂದ ಉದ್ಯೋಗ ಪಡೆದಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಡಾ.ಗುಡ್ಡದೇವ್ ಎಸ್ಟಿಗೆ ಮೀಸಲಿದ್ದ ಆಯುಷ್ ವೈದ್ಯಾಧಿಕಾರಿ ಹುದ್ದೆಗೆ 1995ರ ಏಪ್ರಿಲ್ 9ರಂದು ನೇಮಕಗೊಂಡಿದ್ದರು. ಈ ವೇಳೆ ಎಸ್ಟಿ ವರ್ಗಕ್ಕೆ ಬರುವ ‘ಗೊಂಡ’ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಬಳಿಕ ಸೇವೆ ಕಾಯಂಗೊಂಡು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು.
ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರ ನೀಡಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಹಾಸನದ ಕೃಷ್ಣಮೂರ್ತಿ ನಾಯಕ್ ಮತ್ತು ಸಿ.ವಿ.ನಂಜರಾಜು ದೂರು ನೀಡಿದ್ದರು. ದೂರಿನ ಮೇರೆಗೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿದಾಗ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾಗಿದ್ದರಿಂದ ಡಾ.ಗುಡ್ಡದೇವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ತಮ್ಮನ್ನು ವಜಾ ಮಾಡಿದ ಕ್ರಮ ರದ್ದು ಕೋರಿ ಹಾಗು ಸೇವೆಗೆ ಪುನಃ ಸೇರಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಒಂದೇ ಜಾತಿಯಲ್ಲ: ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಲಬುರಗಿ ಜಿಲ್ಲೆಯಲ್ಲಿ ಕುರುಬ ಮತ್ತು ಗೊಂಡಾ ಸಮುದಾಯವನ್ನು ಒಂದೇ ಎಂದು ಕರೆಯಲಾಗುತ್ತದೆ. ಎರಡೂ ಒಂದೇ ಅರ್ಥ ನೀಡುತ್ತವೆ. 1993ರಲ್ಲಿ ಎರಡೂ ಒಂದೇ ಎಂದು ಕರೆಯಲಾಗುತ್ತಿತ್ತು. 1997ರಲ್ಲಿ ಸರ್ಕಾರ ಕಲಬುರಗಿ ಜಿಲ್ಲೆಯಲ್ಲಿನ ಗೊಂಡ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದಿದ್ದರು. ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿ, ಗೊಂಡ ಮತ್ತು ಕುರುಬ ಎರಡೂ ಬೇರೆ ಬೇರೆ ಜಾತಿಗಳು ಎಂದು ವಿವರಿಸಿದ್ದರು.
