News

ಕೆಡವಲ್ಪಟ್ಟ ಮನೆಯವರೆಲ್ಲರಿಗೂ ಅಗತ್ಯ ನೆಲೆಯನ್ನು ಒದಗಿಸಿ: ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

Share It

ಬೆಂಗಳೂರು: ರಾಜ್ಯ ಸರ್ಕಾರ ಕೋಗಿಲು ಪ್ರಕರಣದಲ್ಲಿ ಅಮಾನವೀಯ ರೀತಿಯಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡಿ ಘನಘೋರ ತಪ್ಪನ್ನು ಮಾಡಿದೆ. ಇದೀಗ ಕೊಟ್ಟ ಮಾತನ್ನು ತಪ್ಪುವ ಮೂಲಕ ಮತ್ತೊಂದು ತಪ್ಪು ಮಾಡಿದೆ, ಬಡವರಲ್ಲಿ ರಾಜ್ಯದವರು, ಹೊರಗಿನವರು ಎಂಬ ಬೇಧಭಾವ ಮಾಡದೆ, ಕೆಡವಲ್ಪಟ್ಟ ಮನೆಯವರೆಲ್ಲರಿಗೂ ಅಗತ್ಯ ನೆಲೆಯನ್ನು ಒದಗಿಸಲೇಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.

ಶುಕ್ರವಾರ ಸಂಯುಕ್ತ ಹೋರಾಟ ಕರ್ನಾಟಕದ ಪರವಾಗಿ ಬಡಗಲಪುರ ನಾಗೇಂದ್ರ, ಎಚ್.ಆರ್.ಬಸವರಾಜಪ್ಪ, ಎಸ್.ವರಲಕ್ಷ್ಮೀ, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು, ಭಗವಾನ್ ರೆಡ್ಡಿ, ಎಸ್.ಆರ್.ಹಿರೇಮಠ, ಮಾವಳ್ಳಿ ಶಂಕರ್, ಅಪ್ಪಣ್ಣ, ಪಿ.ವಿ.ಲೋಕೇಶ್, ಸಿದಗೌಡ ಮೋದಗಿ, ಕೆ.ವಿ.ಭಟ್, ಡಿ.ಎಚ್.ಪೂಜಾರ್, ಸಿದ್ದನಗೌಡ ಪಾಟೀಲ್, ಕುಮಾರ್ ಸಮತಳ, ಯು.ಬಸವರಾಜ್, ಯಶ್ವಂತ್.ಟಿ, ದೇವಿ, ಶಿವಪ್ಪ, ಅಭಿರುಚಿ ಗಣೇಶ್, ನಾಗರಾಜ್ ಪೂಜಾರ್, ನವೀನ್ ಇವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕೋಗಿಲು ಪ್ರಕರಣದ ಸಂತ್ರಸ್ತರಿಗೆ ಮಾನವೀಯ ನೆಲೆಯ ಮೇಲೆ ಹೊಸ ವರ್ಷಕ್ಕೆ ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳ ಬೀಗದ ಕೈ ನೀಡುವ ಮೂಲಕ ಶುಭ ಸಂದೇಶ ನೀಡುವುದಾಗಿ ಮಾತನಾಡಿದ್ದ ಕಾಂಗ್ರೆಸ್ ಸರ್ಕಾರ, ಈಗ ಮೀನಮೇಷ ಎಣಿಸುತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ದಾಖಲೆಗಳು ಇರುವವರಿಗೆ ಮಾತ್ರ ಮನೆ, ಕರ್ನಾಟಕದವರಿಗೆ ಮಾತ್ರ ಮನೆ ಎಂಬ ಹೇಳಿಕೆಗಳನ್ನು ನೀಡತೊಡಗಿದ್ದಾರೆ ಎಂದು ಹೇಳಿದ್ದಾರೆ.

ಧ್ವಂಸಗೊಂಡಿರುವ ಬಡವರ ಮನೆಗಳ ಬದುಕನ್ನೂ ರಾಜಕೀಯಗೊಳಿಸುವ ಜನದ್ರೋಹಿ ಬಿಜೆಪಿ ಪಕ್ಷವು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ಜನರ ನೆರವಿಗೆ ಧಾವಿಸದಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಇಲ್ಲಿರುವವರು ಬಾಂಗ್ಲಾದೇಶಿಗಳು, ರಾಜ್ಯ ಸರ್ಕಾರ ಕರ್ನಾಟಕವನ್ನು ಬಾಂಗ್ಲಾದೇಶ ಮಾಡಲು ಹೊರಟಿದೆ ಎಂಬ ಸುಳ್ಳು ಆರೋಪಗಳ ಮೂಲಕ ಬೊಬ್ಬಿಡುತ್ತಿದೆ. ಇಲ್ಲಿ ವಾಸವಾಗಿರುವ ಜನ ರಾಜ್ಯದ ವಿವಿಧ ಪ್ರದೇಶಗಳಿಂದ, ಪಕ್ಕದ ಆಂಧ್ರಪ್ರದೇಶದಿಂದ, ಒಂದಷ್ಟು ಉತ್ತರ ಪ್ರದೇಶದಿಂದ ಬಂದಿರುವ ಕಡುಬಡವ ಜನರಾಗಿದ್ದಾರೆ. ಇಲ್ಲಿ ಒಬ್ಬರೇ ಒಬ್ಬರು ಬಾಂಗ್ಲಾದೇಶಿಯೂ ಇಲ್ಲ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ತೆಗೆದುಕೊಳ್ಳುತ್ತಿರುವ ತೀರ್ಮಾನಗಳನ್ನು ಕಾಂಗ್ರೆಸ್ ಒಳಗೂ ವಿರೋಧಿಸುವ ಶಕ್ತಿಗಳು ಕೆಲಸ ಮಾಡುತ್ತಿವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡಕ್ ಮಾತುಗಳು ಇದನ್ನು ಪ್ರತಿನಿಧಿಸುತ್ತವೆ. ಬೆಂಗಳೂರಿನ ಎಲ್ಲ ಅಕ್ರಮ ಜನವಸತಿಗಳನ್ನು ತೆರವುಗೊಳಿಸುವುದಾಗಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿಯ ಧೋರಣೆಯನ್ನು ಸಂಯುಕ್ತ ಹೋರಾಟ ಕರ್ನಾಟಕ ಖಂಡಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವರದಿಯ ಪ್ರಕಾರ ಬೆಂಗಳೂರು ಮತ್ತು ಸುತ್ತಮುತ್ತ 23 ಸಾವಿರ ಎಕರೆ ಭೂಮಿ ಬಲಾಢ್ಯರ ಅಕ್ರಮ ವಶದಲ್ಲಿದೆ. ಅವರನ್ನು ಮುಟ್ಟುವ ಧೈರ್ಯ ಇಲ್ಲದ ಸರ್ಕಾರ, ಬಡವರ ಬದುಕನ್ನು ನಾಶ ಮಾಡಲು ನೋಡುತ್ತಿರುವುದು ವಿಷಾದನೀಯ. ಕೋಗಿಲು ಬಡಾವಣೆಯಲ್ಲಿ ಧ್ವಂಸಕಾಂಡದಿಂದ ಸರಕಾರ ಪಾಠ ಕಲಿಯಬೇಕು. ಬಡವರನ್ನು ಪರ್ಯಾಯ ವ್ಯವಸ್ಥೆಯಾದರೂ ಮಾಡದೆ ಅವರ ನೆಲೆಯಿಂದ ತೆರವುಗೊಳಿಸಲು ಮುಂದಾಗಬಾರದು ಎಂದು ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.


Share It

You cannot copy content of this page