News

ವಿವಾಹ ವಿಚ್ಛೇದನಕ್ಕೆ ಎಲ್ಲ ಆರೋಪಗಳೂ ಸಾಬೀತಾಗಬೇಕು ಎಂದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

Share It

ಎರಡು ಅರೋಪ ಮುಂದಿಟ್ಟುಕೊಂಡು ವಿಚ್ಛೇದನ ಕೋರಿದ ಸಂದರ್ಭದಲ್ಲಿ ಒಂದು ಅರೋಪ ಸಾಬೀತಾಗಿ ಮತ್ತೊಂದು ದೃಢಪಡದಿದ್ದರೂ ವಿಚ್ಚೇದನ ಮಂಜೂರು ಮಾಡಲು ಕಾನೂನಿನಲ್ಲಿ ತೊಡಕು ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತುಮಕೂರಿನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಲು ನಿರಾಕರಿಸಿದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಇದೇ ವೇಳೆ ಪತ್ನಿಯ ಮನವಿ ಪುರಸ್ಕರಿಸಿ ದಂಪತಿಗೆ ವಿಚ್ಛೇದನ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪತಿಯು ನೀಡಿರುವ ಮಾನಸಿಕ ಕ್ರೌರ್ಯ ಮತ್ತು ಪರಿತ್ಯಾಗದ ಕಾರಣವನ್ನು ಪರಿಗಣಿಸಿ ವಿಚ್ಛೇದನ ನೀಡುವಂತೆ ಪತ್ನಿ ಕೋರಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರೆ ಪತ್ನಿ ಆಕೆಯ ಸಹೋದ್ಯೋಗಿಯೊಬ್ಬನ ಜತೆ ಸಂಬಂಧ ಹೊಂದಿದ್ದು, ಆತನನ್ನು ಮದುವೆಯಾಗಲೆಂದೇ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪತಿ ಆಧಾರರಹಿತ ಅರೋಪ ಮಾಡಿದ್ದಾರೆ. ಇದು ಪತ್ನಿಯ ಚಾರಿತ್ರ್ಯವನ್ನು ಹಾಳು ಮಾಡುವುದು ಬಿಟ್ಟು ಮತ್ತೇನು ಅಲ್ಲ. ಪತಿ ಪತ್ನಿಯ ಚಾರಿತ್ರ್ಯ ಶಂಕಿಸಿ ಮಾನಸಿಕ ಕ್ರೌರ್ಯ ಎಸಗಿರುವುದು ಪ್ರಕರಣದಲ್ಲಿ ಸ್ಪಷ್ಟವಾಗಿದೆ.

ಇನ್ನು ಪತಿ ಪತ್ನಿಯೊಂದಿಗೆ ಜೀವನ ನಡೆಸುವ ಇಂಗಿತ ವ್ಯಕ್ತಪಡಿಸಿದ್ದರೆ, ಪತ್ನಿ ಆತನೊಂದಿಗೆ ಜೀವಿಸಲು ಅಸಾಧ್ಯ ಎಂದಿದ್ದಾರೆ. ಹೀಗಾಗಿ ಪತಿಯ ಮಾನಸಿಕ ಕ್ರೌರ್ಯ ಸಾಬೀತಾದರೂ ಪರಿತ್ಯಜಿಸಿರುವ ಆರೋಪ ದೃಢಪಟ್ಟಿಲ್ಲ. ಆದರೆ, ವಿಚ್ಚೇದನ ಮಂಜೂರು ಮಾಡಲು ಎಲ್ಲ ಆರೋಪಗಳೂ ಸಾಬೀತಾಗಬೇಕು ಎಂದು ಕಾನೂನು ಕಡ್ಡಾಯಗೊಳಿಸುವುದಿಲ್ಲ. ಒಂದು ಆರೋಪ ಸಾಬೀತಾದರೂ, ವಿಚ್ಛೇದನ ಮಂಜೂರು ಮಾಡಬಹುದು ಎಂದು ಅಭಿಪ್ರಾಯಪಟ್ಟು, ವಿವಾಹ ಅನೂರ್ಜಿತಗಳಿಸಿ ವಿಚ್ಛೇದನ ನೀಡಿದೆ.

ಪ್ರಕರಣದ ಸಂಖ್ಯೆ: MISCELLANEOUS FIRST APPEAL NO. 2107 OF 2020 (FC)

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page