Law

ಮತ್ತೊಂದು ಮಹಿಳೆಯ ಜತೆಗಿರುವುದು ದ್ವಿಪತ್ನಿತ್ವ ಅಪರಾಧವಲ್ಲ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Share It

ವಿವಾಹವಾಗಿರುವ ವ್ಯಕ್ತಿ ಅಥವಾ ಮಹಿಳೆ ಅಧಿಕೃತವೆನ್ನಿಸುವ ರೀತಿಯಲ್ಲಿ ಮತ್ತೊಂದು ವಿವಾಹವಾಗದೇ ಪರ ಪರುಷ ಅಥವಾ ಮಹಿಳೆಯ ಜತೆಗೆ ಗಂಡ-ಹೆಂಡತಿಯಂತೆ ವಾಸವಿದ್ದರೆ ಅದು ದ್ವಿಪತ್ನಿತ್ವದ ಅಪರಾಧ ಎನಿಸಿಕೊಳ್ಳುವುದಿಲ್ಲ ಹಾಗೂ ಈ ನಿಯಮದ ಅಡಿ ವಿಚಾರಣೆ ನಡೆಸಲು ಬರುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ.

ಇದೇ ವೇಳೆ ಪತ್ನಿ, ತನ್ನ ಪತಿ ಮತ್ತೋರ್ವ ಮಹಿಳೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದು, ಅವರಿಬ್ಬರೂ ಗಂಡ-ಹೆಂಡತಿಯಂತೆ ಬಾಳುತ್ತಿದ್ದಾರೆ ಎಂದು ಆರೋಪಿಸಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ದ್ವಿಪತ್ನಿತ್ವ ಹಾಗೂ ಇತರೆ ಆರೋಪಗಳ ಅಡಿ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕುಲದೀಪ್ ಮಾಥುರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಐಪಿಸಿ ಸೆಕ್ಷನ್‌ 494ರ ಪ್ರಕಾರ ಪತಿ ಅಥವಾ ಪತ್ನಿ ಜೀವಂತವಿರುವಾಗ ಅವರು ಇನ್ನೊಬ್ಬರನ್ನು ಮದುವೆಯಾಗುವುದು ಶಿಕ್ಷಾರ್ಹ ಅಪರಾಧ ಎನ್ನಿಸಿಕೊಳ್ಳುತ್ತದೆ. ಇಂತಹ ಅಪರಾಧಕ್ಕೆ 7 ವರ್ಷಗಳವರೆಗೆ ಶಿಕ್ಷೆ/ದಂಡ ವಿಧಿಸಬಹುದಾಗಿದೆ. ಆದರೆ, ವಿವಾಹಿತ ಪುರುಷ/ಮಹಿಳೆ ಅಧಿಕೃತವೆನ್ನಿಸಿಕೊಳ್ಳುವ ರೀತಿಯಲ್ಲಿ ಎರಡನೇ ವಿವಾಹವಾಗದೆ ಮತ್ತೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದರೆ ಅದನ್ನು ದ್ವಿಪತ್ನಿತ್ವ ಅಥವಾ ದ್ವಿಪತಿತ್ವದ ಅಪರಾಧವಾಗಿ ಪರಿಗಣಿಸಲು ಬರುವುದಿಲ್ಲ ಎಂದು ಹೈಕೋರ್ಟ್ ವಿವರಿಸಿದೆ.

ಅಲ್ಲದೇ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ ವ್ಯಕ್ತಿ ಬೇರೊಬ್ಬ ಮಹಿಳೆಯೊಂದಿಗೆ ಎರಡನೇ ವಿವಾಹವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳನ್ನು ಪತ್ನಿ ನೀಡಿಲ್ಲ. ದ್ವಿಪತ್ನಿತ್ವದ ಆರೋಪ ಸಾಬೀತಾಗಿಲ್ಲ. ಮಹಿಳೆಯ ಪರ ವಕೀಲರು ಆರೋಪಿತನಾಗಿರುವ ಅರ್ಜಿದಾರ ಹಾಗೂ ಎರಡನೆ ಹೆಂಡತಿ ಎಂದು ಹೇಳಲಾಗಿರುವ ಮಹಿಳೆ ಒಟ್ಟಿಗೆ ಗಂಡ-ಹೆಂಡತಿ ರೀತಿಯಲ್ಲಿ ವಾಸಿಸುತ್ತಿದ್ದು ಅದನ್ನು ನಾತ ಸಂಪ್ರದಾಯದ ಮದುವೆ ಎಂದು ಕರೆಯಲಾಗುತ್ತದೆ ಎಂದು ವಾದಿಸಿದ್ದರೂ, ಆ ಸಂಪ್ರದಾಯಗಳನ್ನು ಪಾಲಿಸಿರುವ ಕುರಿತು ಯಾವುದೇ ದಾಖಲೆಗಳಿಲ್ಲ.

ಆದ್ದರಿಂದ, ಅರ್ಜಿದಾರರ ವಿರುದ್ಧ ದ್ವಿಪತ್ನಿತ್ವ ಆರೋಪದಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.

ಹಿನ್ನೆಲೆ: ತನ್ನ ಪತಿ 20 ವರ್ಷಗಳ ಹಿಂದೆ ಪರಸ್ತ್ರೀಯೊಂದಿಗೆ ವಿವಾಹವಾಗಿ ವಂಚಿಸಿದ್ದಾರೆ. ನಾನು ಜೀವಂತ ಇರುವಾಗಲೇ ಆಕೆಯೊಟ್ಟಿಗೆ ವಾಸಿಸುತ್ತಿದ್ದಾರೆ. ಜತೆಗೆ ಪತಿ ಮತ್ತು ಆತನ ಮನೆಯವರು ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ. ಆದ್ದರಿಂದ ಪತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ಪತ್ನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.

Case No: S.B. Criminal Misc(Pet.) No. 1154/2019

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.


Share It

You cannot copy content of this page