ಒಂದು ಕಾಲದಲ್ಲಿ ತ್ಯಾಜ್ಯವಾಗಿದ್ದ ತೆಂಗಿನಕಾಯಿ ಚಿಪ್ಪು/ಗೆರಟೆ ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ಉದ್ಯಮವಾಗಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಚಿಪ್ಪು/ಗೆರಟೆ ಬೇಡಿಕೆ ಹೇಗೆ ಹೆಚ್ಚಾಯಿತು? ಇಲ್ಲಿದೆ ಸಂಪೂರ್ಣ ವರದಿ.
ಒಂದು ಕಾಲದಲ್ಲಿ ಪುಕ್ಕಟೆಯಾಗಿ ಕೊಟ್ಟರೂ ಬೇಡವೆಂದು ಕೈಬಿಡಲಾಗುತ್ತಿದ್ದ ತೆಂಗಿನಕಾಯಿ ಚಿಪ್ಪು/ಗೆರಟೆ ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ. ಅಡುಗೆಮನೆಯ ಕಸ, ಸುಟ್ಟು ಬೂದಿಯಾಗುತ್ತಿದ್ದ ಅಥವಾ ತ್ಯಾಜ್ಯದ ಗುಡ್ಡೆ ಸೇರುತ್ತಿದ್ದ ಚಿಪ್ಪು/ಗೆರಟೆ, ಈಗ ರೈತರಿಂದ ಹಿಡಿದು ಮನೆಮಂದಿವರೆಗೂ ಆದಾಯದ ಹೊಸ ಮೂಲವಾಗಿದೆ.
ಇಷ್ಟೊಂದು ಬೇಡಿಕೆ ಏಕೆ: ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಆಹಾರ ಪದಾರ್ಥವಾಗಿ ವ್ಯಾಪಕ ಬಳಕೆಯಲ್ಲಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹಸಿ ತೆಂಗಿನಕಾಯಿ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರಿಂದ ಪ್ರತಿದಿನವೂ ಅಪಾರ ಪ್ರಮಾಣದ ಚಿಪ್ಪು/ಗೆರಟೆ ಹೊರಬರುತ್ತದೆ. ಹಿಂದೆ ಇದು ಕೇವಲ ಕರಕುಶಲ ವಸ್ತುಗಳ ತಯಾರಿಕೆಗೆ ಸೀಮಿತವಾಗಿದ್ದರೆ, ಇತ್ತೀಚೆಗೆ ಇದ್ದಿಲು (ಚಾರ್ಕೋಲ್) ತಯಾರಿಸುವ ಕಾರ್ಖಾನೆಗಳ ಬೇಡಿಕೆ ಹೆಚ್ಚಿದ ಕಾರಣ ಚಿಪ್ಪು/ಗೆರಟೆ ಮೌಲ್ಯವೂ ಏರಿಕೆಯಾಗಿದೆ.
ತೆಂಗಿನಕಾಯಿ ವ್ಯಾಪಾರಿಗಳು, “ಹಿಂದೆ ಚಿಪ್ಪು/ಗೆರಟೆ ಸಣ್ಣ ಪ್ರಮಾಣದಲ್ಲಿ ಮಾತ್ರ ಮಾರಾಟವಾಗುತ್ತಿತ್ತು. ಈಗ ಕೇರಳದಲ್ಲಿ ಇದ್ದಿಲು ಫ್ಯಾಕ್ಟರಿಗಳು ಹೆಚ್ಚಾಗಿವೆ. ತಮಿಳುನಾಡಿನಿಂದಲೂ ಚಿಪ್ಪು/ಗೆರಟೆಗಾಗಿ ಕೇಳಿಕೊಂಡು ಬರುತ್ತಿದ್ದಾರೆ. ಇಂದು ತೆಂಗಿನಕಾಯಿಗೆ ಎಷ್ಟು ಮೌಲ್ಯವೋ, ಚಿಪ್ಪು/ಗೆರಟೆಗೆ ಕೂಡ ಅಷ್ಟೇ ಮಹತ್ವ ಬಂದಿದೆ.” ಎನ್ನುತ್ತಾರೆ.
ಕರ್ನಾಟಕದಲ್ಲಿ ದಿನನಿತ್ಯ ತೆಂಗಿನಕಾಯಿ ಬಳಸುವ ಮನೆಗಳು ತಿಂಗಳಿಗೊಮ್ಮೆ ಚಿಪ್ಪು/ಗೆರಟೆ ಸಂಗ್ರಹಿಸಿ ಮಾರಾಟ ಮಾಡುತ್ತಿವೆ. ಮನೆಬಾಗಿಲಿಗೆ ಹೋಗುವ ಸಂಗ್ರಹಕರು ಒಂದು ತೆಂಗಿನಕಾಯಿ ಚಿಪ್ಪು/ಗೆರಟೆಗೆ ರೂ.1 ರಿಂದ ರೂ.1.50ವರೆಗೆ ನೀಡುತ್ತಾರೆ. ಸಂಗ್ರಹಿಸಿದ ಚಿಪ್ಪು/ಗೆರಟೆಯನ್ನು ವ್ಯಾಪಾರಿಗಳಿಗೆ ಕಿಲೋ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ.
ಇನ್ನಷ್ಟು ಬೆಲೆ ಏರಿಕೆ: ವ್ಯಾಪಾರಿಗಳು ಹೇಳುವಂತೆ, ಕಳೆದ ವರ್ಷ ಚಿಪ್ಪು/ಗೆರಟೆ ಕಿಲೋಗೆ ರೂ.25 ರಿಂದ ರೂ.100ರ ವರೆಗೆ ಮಾರಾಟವಾಗಿತ್ತು. ಈ ವರ್ಷ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ರೂ.150 ತಲುಪುವ ಸಾಧ್ಯತೆಯಿದೆ. ವಿಶೇಷವಾಗಿ ಒಣಗಿದ, ತೇವಾಂಶವಿಲ್ಲದ ಚಿಪ್ಪು/ಗೆರಟೆಗೆ ಹೆಚ್ಚಿನ ಬೇಡಿಕೆ ಇದೆ. ಮಳೆಗಾಲದಲ್ಲಿ ತೂಕ ಹೆಚ್ಚಾಗುವ ಕಾರಣ ಬೆಲೆ ಸ್ವಲ್ಪ ಇಳಿಮುಖವಾಗುತ್ತದೆ.
ಬಳಕೆ ಎಲ್ಲಿ?: ಆಧುನಿಕ ಯಂತ್ರಗಳ ಮೂಲಕ ಚಿಪ್ಪು/ಗೆರಟೆ ಸಂಸ್ಕರಣೆಯಿಂದ ಉತ್ತಮ ಗುಣಮಟ್ಟದ ಕಾರ್ಬನ್ ಮತ್ತು ಚಾರ್ಕೋಲ್ ದೊರೆಯುತ್ತಿದೆ. ಇದರಿಂದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಚಿಪ್ಪು/ಗೆರಟೆಯಿಂದ ತಯಾರಿಸಿದ ಸೌಟು, ಕಪ್‌ಗಳು, ಅಲಂಕಾರಿಕ ವಸ್ತುಗಳು ಹಿಂದಿನಿಂದಲೂ ಜನಪ್ರಿಯವಾಗಿವೆ. ತೋಟಗಳಲ್ಲಿ ಗಿಡಗಳ ಬುಡಕ್ಕೆ ಹಾಕುವುದರಿಂದ ಬೇರುಗಳ ಬೆಳವಣಿಗೆಗೆ ಸಹಾಯಕ. ಆದರೆ ಈಗ ದೊಡ್ಡ ಪ್ರಮಾಣದಲ್ಲಿ ಚಿಪ್ಪು/ಗೆರಟೆ ಇದ್ದಿಲು ತಯಾರಿಕೆಗೆ ಬಳಕೆಯಾಗುತ್ತಿದೆ. ಈ ಇದ್ದಿಲು ನೀರು ಶುದ್ಧೀಕರಣ ಘಟಕಗಳು, ಹೋಟೆಲ್‌ಗಳ ಬಾರ್ಬೆಕ್ಯೂ, ಗ್ರಿಲ್, ಕೈಗಾರಿಕೆಗಳು ಹಾಗೂ ರಫ್ತು ಮಾರುಕಟ್ಟೆಯಲ್ಲಿ ಬಳಸಲಾಗುತ್ತಿದೆ. ಭಾರತದಿಂದ ಆಫ್ರಿಕಾ ಮತ್ತು ಯುರೋಪಿನ ದೇಶಗಳಿಗೆ ರಫ್ತು ಕೂಡ ನಡೆಯುತ್ತಿದೆ.
ಕಲ್ಪವೃಕ್ಷ ತೆಂಗು: ತೆಂಗಿನ ಪ್ರತಿಯೊಂದು ಭಾಗವೂ ಉಪಯುಕ್ತ. ಒಂದು ಕಾಲದಲ್ಲಿ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟ ತೆಂಗಿನಕಾಯಿ ಚಿಪ್ಪು/ಗೆರಟೆ ಇಂದು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ರೈತರು ಮತ್ತು ವ್ಯಾಪಾರಿಗಳಿಗೆ ಲಾಭದಾಯಕ ಸಂಪನ್ಮೂಲವಾಗಿ ರೂಪುಗೊಂಡಿದೆ.
