News

ನಿಯಮ ಪಾಲಿಸದಿದ್ದರೆ ಭಾರತ ಬಿಟ್ಟು ಹೋಗಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಗರಂ

Share It

ಭಾರತದಲ್ಲಿ ವಾಟ್ಸಾಪ್ ಬ್ಯಾನ್ ಆಗುತ್ತಾ ಎಂಬುದೊಂದು ಚರ್ಚೆ ಶುರುವಾಗಿದೆ. ಸುಪ್ರೀಂಕೋರ್ಟ್ ವಾಟ್ಸಾಪ್ ಮಾತೃಸಂಸ್ಥೆ ಮೇಟಾಗೆ ನೀಡಿದ ಎಚ್ಚರಿಕೆ ಇಂತಹದ್ದೊಂದು ಆತಂಕವನ್ನು ಹುಟ್ಟುಹಾಕಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ತಂತ್ರಜ್ಞಾನ ಕಂಪನಿಗಳು ಭಾರತದಲ್ಲಿ ವಾಸಿಸುವಾಗ ನಾಗರಿಕರ ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಕಂಪನಿಗಳು ಸಂವಿಧಾನವನ್ನು ಪಾಲಿಸಲು ಸಾಧ್ಯವಾಗದಿದ್ದರೆ, ಅವರು ದೇಶವನ್ನು ತೊರೆಯಬೇಕು ಎಂದು ಹೇಳಿದೆ.

ವಾಟ್ಸಾಪ್‌ನ 2021ರ ಗೌಪ್ಯತಾ ನೀತಿಗೆ ಸಂಬಂಧಿಸಿ ವಿಚಾರಣೆ ನಡೆಯುತ್ತಿದೆ. ಭಾರತೀಯ ಸ್ಪರ್ಧಾ ಆಯೋಗ ವಾಟ್ಸಾಪ್‌ಗೆ 213 ಕೋಟಿ ದಂಡ ವಿಧಿಸಿದೆ. ಇದನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಎತ್ತಿಹಿಡಿದಿದೆ. ಈ ನಿರ್ಧಾರವನ್ನು ಮೆಟಾ ಮತ್ತು ವಾಟ್ಸಾಪ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರ ಪೀಠ ವಿಚಾರಣೆ ನಡೆಸುತ್ತಿದೆ.

ವಿಷಯದ ಗಂಭೀರತೆ ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಅರ್ಜಿಯಲ್ಲಿ ಪಕ್ಷವನ್ನಾಗಿ ಮಾಡಲು ನಿರ್ದೇಶಿಸಿದೆ. ನ್ಯಾಯಾಲಯವು ಕಂಪನಿಗಳು ಡೇಟಾ ಹಂಚಿಕೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕೆಂದು ಅಥವಾ ನ್ಯಾಯಾಲಯ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಫೆಬ್ರವರಿ 9 ರಂದು ಮಧ್ಯಂತರ ಆದೇಶ ನೀಡುವುದಾಗಿ ಪೀಠ ಹೇಳಿದೆ.

‘ಡೇಟಾ ಹಂಚಿಕೆ ಹೆಸರಿನಲ್ಲಿ ಕಳ್ಳತನ ಸಹಿಸಲಾಗುವುದಿಲ್ಲ’: ವಿಚಾರಣೆ ಸಮಯದಲ್ಲಿ, ಮುಖ್ಯ ನ್ಯಾಯಮೂರ್ತಿಗಳು ವಾಟ್ಸಾಪ್‌ನ ಗೌಪ್ಯತಾ ನೀತಿ ಭಾಷೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಈ ದೇಶದಲ್ಲಿ ಗೌಪ್ಯತೆಯ ಹಕ್ಕು ಬಹಳ ಮುಖ್ಯ ಮತ್ತು ಕಂಪನಿಗಳು ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದರು.

“ಡೇಟಾ ಹಂಚಿಕೆ ನೆಪದಲ್ಲಿ ನೀವು ದೇಶದ ಗೌಪ್ಯತೆ ಜೊತೆ ಆಟವಾಡಲು ಸಾಧ್ಯವಿಲ್ಲ. ನಿಮ್ಮ ಗೌಪ್ಯತೆ ನಿಯಮಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗದಷ್ಟು ಜಾಣತನದಿಂದ ರಚಿಸಲಾಗಿದೆ. ಇದು ವೈಯಕ್ತಿಕ ಮಾಹಿತಿ ಕದಿಯುವ ‘ನಾಗರಿಕ ಮಾರ್ಗ’. ಇದನ್ನು ನಾವು ಅನುಮತಿಸುವುದಿಲ್ಲ” ಎಂದು ಪೀಠವು ಸ್ಪಷ್ಟಪಡಿಸಿತು. “ನೀವು ನಮ್ಮ ಸಂವಿಧಾನವನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಭಾರತವನ್ನು ಬಿಟ್ಟು ಹೋಗಿ. ನಾಗರಿಕರ ಗೌಪ್ಯತೆಗೆ ಧಕ್ಕೆಯಾಗಲು ನಾವು ಅನುಮತಿಸುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.


Share It

You cannot copy content of this page