ಚಿಕಿತ್ಸೆಗೆ ಹಣ ಹೊಂದಿಸಲು ಭೂಮಿ ಮಾರಾಟಕ್ಕೆ ಇದ್ದ ಅಡ್ಡಿಯನ್ನು ನಿವಾರಿಸುವ ಮೂಲಕ ಹೈಕೋರ್ಟ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೋಗಿಗಳ ನೆರವಿಗೆ ಧಾವಿಸಿದೆ.
ಕಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬ ಸದಸ್ಯರ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಇರುವ ಭೂಮಿಯನ್ನೂ ಮಾರಾಟ ಮಾಡಲು ಸರ್ಕಾರ ಬಿಡುತ್ತಿಲ್ಲ. ಈ ನಿಟ್ಟಿನಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ ನೆರವು ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಭೂಮಿಯ ಮಾರಾಟಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶಾಂತಮ್ಮ ಹಾಗೂ ಅವರ ಇಬ್ಬರು ಪುತ್ರರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಗಳು ಹಾಗೂ ಅಳಿಯ ಎಲ್ಲರನ್ನು ಆರೈಕೆ ಮಾಡುತ್ತಿದ್ದಾರೆ. ಚಿಕಿತ್ಸೆಗೆ ಈಗಾಗಲೇ 50 ಲಕ್ಷ ಸಾಲ ಮಾಡಿದ್ದು ಮತ್ತಷ್ಟು ಹಣದ ಅವಶ್ಯಕತೆ ಇದೆ. ಇದೇ ವೇಳೆ ಸಾಲವನ್ನೂ ಮರುಪಾವತಿಸಬೇಕಾಗಿದ್ದು ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಕುಟುಂಬಕ್ಕೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ 2 ಎಕರೆ 3 ಗುಂಟೆ ಭೂಮಿ ಇದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ. ಆದರೆ, ಈವರೆಗೆ ಪರಿಹಾರ ಪಾವತಿಸಿಲ್ಲ.
ಈ ಹಿನ್ನೆಲೆಯಲ್ಲಿ ಶಾಂತಮ್ಮ, ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಗೆ ನಿಗದಿಪಡಿಸಿರುವ ಪರಿಹಾರ ಮೊತ್ತದಲ್ಲಿ ಶೇಕಡಾ 50ರಷ್ಟು (1.62 ಕೋಟಿ ರೂ.) ಪಾವತಿಸುವಂತೆ ಕೆಐಎಡಿಬಿಗೆ ಮನವಿ ಮಾಡಿದ್ದರು. ಕೆಐಎಡಿಬಿ ಮನವಿಗೆ ಸ್ಪಂದಿಸದೇ ಇದ್ದುದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ತಮ್ಮ ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಾಲಯ ಭೂಮಿ ಮಾರಾಟಕ್ಕೆ ಅನುಮತಿ ನೀಡಬೇಕು ಇಲ್ಲವೇ ಭೂಮಿಗೆ ಪರಿಹಾರ ನೀಡಲು ಕೆಐಎಡಿಬಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಹೈಕೋರ್ಟ್ ತೀರ್ಪು: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಹಕ್ಕು ನೀಡಿದೆ. ನ್ಯಾಯಾಲಯ ಒಂದು ವೇಳೆ ಈ ಮನವಿಯನ್ನು ಪರಿಗಣಿಸದಿದ್ದರೆ ಅರ್ಜಿದಾರರು ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಇದೆ. ಚಿಕಿತ್ಸೆಗೆ ತುರ್ತಾಗಿ ಹಣದ ಅಗತ್ಯವಿದೆ. ಇದೀಗ ಭೂಮಿಯ ಪರಭಾರೆಗೆ ಅವಕಾಶ ನೀಡದಿದ್ದರೆ ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಮಾರಣಾಂತಿಕ ಕಾಯಿಲೆಗೆ ಸಿಲುಕಿರುವ ವ್ಯಕ್ತಿ ಚಿಕಿತ್ಸೆಗೆ ಹಣ ಹೊಂದಿಸಲು ತನ್ನ ಜೀವನೋಪಾಯಕ್ಕಾಗಿ ಉಳಿಸಿಕೊಂಡ ಜಮೀನನ್ನು ಮಾರಾಟ ಮಾಡದಂತೆ ತಡೆದರೆ ಅದು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಆಕ್ಸಿಜನ್ ಮಾಸ್ಕ್ ತೆಗೆದಂತಾಗುತ್ತದೆ ಎಂದು ಅರ್ಜಿದಾರರ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದೆ.
ಹಾಗೆಯೇ, ಸ್ವಾಧೀನಕ್ಕೆ ಗುರುತಿಸಿರುವ ಜಮೀನಿನ ಶೇಕಡಾ 50ರಷ್ಟು ಭೂಮಿಯನ್ನು ಅರ್ಜಿದಾರರು ಪರಭಾರೆ ಮಾಡಲು ಅನುಮತಿಸಲಾಗುತ್ತಿದೆ ಎಂದು ಹೈಕೋರ್ಟ್ ಆದೇಶಿಸಿರುವ ಹೈಕೋರ್ಟ್, ಒಂದು ವೇಳೆ, ಜಮೀನನ್ನು ಮಾರಾಟ ಮಾಡಿದಲ್ಲಿ ಖರೀದಿಸುವವರ ವಿವರ ಮತ್ತು ಮಾರಾಟದ ವಿವರಗಳನ್ನು ಸರ್ಕಾರ ಮತ್ತು ಕೆಐಎಡಿಬಿಗೆ ತಲುಪಿಸಬೇಕು ಎಂದು ಅರ್ಜಿದಾರರಿಗೆ ತಿಳಿಸಿದೆ.
(WP 4897/2023)
