ಪಿಎಂಎಲ್ ಕಾಯ್ದೆ ಅಡಿ ದಾಖಲಿಸುವ ಖಾಸಗಿ ವ್ಯಕ್ತಿಗಳ ದೂರುಗಳನ್ನು ವಿಚಾರಣಾ ನ್ಯಾಯಾಲಯಗಳು ಪುರಸ್ಕರಿಸುವಂತಿಲ್ಲ ಎಂದು ಕಲಬುರಗಿ ಹೈಕೋರ್ಟ್ ಪೀಠ ಆದೇಶಿಸಿದೆ.
ವಿಧಾನಪರಿಷತ್ ಸದಸ್ಯ ಹಾಗು ಇತರರರು ತಮ್ಮ ವಿರುದ್ಧ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002ರ (ಪಿಎಂಎಲ್ ಕಾಯ್ದೆ) ಅಡಿಯಲ್ಲಿ ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸುವ ವೇಳೆ ಹೈಕೋರ್ಟ್ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ ‘ಪಿಎಂಎಲ್ ಕಾಯ್ದೆ ಅಡಿ ದಾಖಲಿಸುವ ಖಾಸಗಿ ವ್ಯಕ್ತಿಗಳ ದೂರುಗಳನ್ನು ವಿಚಾರಣಾ ನ್ಯಾಯಾಲಯಗಳು ಪುರಸ್ಕರಿಸುವಂತಿಲ್ಲ. ಪಿಎಂಎಲ್ ಕಾಯ್ದೆಯ ಸೆಕ್ಷನ್ 45ರ ಅನುಸಾರ ಸರ್ಕಾರದ ಸಕ್ಷಮ ಪ್ರಾಧಿಕಾರ ಅಥವಾ ಅಧಿಕಾರಿಯಿಂದ ಬಂದ ಲಿಖಿತ ದೂರಿನ ಹೊರತಾಗಿ ಖಾಸಗಿ ದೂರನ್ನು ಪರಿಗಣಿಸಲಾಗದು. ಹಾಗೆಯೇ, ಪಿಎಂಎಲ್ ಕಾಯ್ದೆಯು ವಿಶೇಷ ಶಾಸನವಾಗಿರುವುದರಿಂದ ಸಿಆರ್ಪಿಸಿಯ ನಿಯಮಗಳನ್ನು ಇಲ್ಲಿ ಯಥಾವತ್ತಾಗಿ ಅನ್ವಯಿಸಲಾಗದು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ನಮೋಶಿ ಅವರು ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ (ಎಚ್‌ಕೆಇಎಸ್) ಅಧ್ಯಕ್ಷರಾದ ಸಮಯದಲ್ಲಿ ಸೊಸೈಟಿ ಹಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಒ.ಎಂ.ಮಹೇಶ್ ಮತ್ತು ಲಿಂಗನಗೌಡ ಎಂಬುವರು 2016ರಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಖಾಸಗಿ ದೂರಿನಲ್ಲಿನ ಅಂಶಗಳನ್ನು ಸಂಜ್ಞೆಯ ಅಪರಾಧವೆಂದು ಪರಿಗಣಿಸಿದ್ದ ಮಂಗಳೂರಿನ ವಿಶೇಷ ನ್ಯಾಯಾಲಯ ನಮೋಶಿ, ಬಾಬುರಾವ್ ಹಾಗೂ ಡಾ. ಸಂಪತ್ ಲೋಯಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಕೋರಿ ಆರೋಪಿತರು ಹೈಕೋರ್ಟ್ ಮೆಟ್ಟಿಲೇರಿದ್ದರು.
(CRL.P 9071/2021)
