ರಾಜ್ಯದ ಪೊಲೀಸ್ ಇಲಾಖೆಗೆ ಒಟ್ಟು 8,176 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಮಾರ್ಚ್ 4, 2026 ರಂದು ಅನುಮತಿ ಜಾರಿಗೊಂಡಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲು ದಾರಿ ತೆರೆಯಲಾಗಿದೆ.
ಯಾವ ಹುದ್ದೆಗಳಿಗೆ ಅವಕಾಶ?: ಈ ನೇಮಕಾತಿಯಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್, ಕೆಎಸ್‌ಆರ್‌ಪಿ ಕಾನ್ಸ್ಟೇಬಲ್, ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್, ಕೆಎಸ್‌ಐಎಸ್‌ಎಫ್ ಕಾನ್ಸ್ಟೇಬಲ್ ಹಾಗೂ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಸೇರಿವೆ. ಕಲ್ಯಾಣ ಕರ್ನಾಟಕ ಮತ್ತು ಇತರೆ ಪ್ರದೇಶಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.
ಹುದ್ದೆಗಳ ವಿವರ ಈ ಕೆಳಗಿನಂತಿದೆ:
ನಾಗರಿಕ ಪೊಲೀಸ್ ಕಾನ್ಸ್ಟೇಬಲ್ – 4,110
ಕೆಎಸ್‌ಆರ್‌ಪಿ ಕಾನ್ಸ್ಟೇಬಲ್ – 2,032
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ – 1,650
ಕೆಎಸ್‌ಐಎಸ್‌ಎಫ್ ಕಾನ್ಸ್ಟೇಬಲ್ – 364
ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ – 20
ಒಟ್ಟು – 8,176 ಹುದ್ದೆಗಳು
ಮೀಸಲಾತಿಯಲ್ಲಿ ಪರಿಷ್ಕರಣೆ: ಈ ಬಾರಿ ನೇಮಕಾತಿಯಲ್ಲಿ ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ಪರಿಶಿಷ್ಟ ಜಾತಿ (SC) ಮೀಸಲಾತಿಯನ್ನು 15 ಶೇಕಡೆಯಿಂದ 17 ಶೇಕಡಕ್ಕೆ ಹಾಗೂ ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು 3 ಶೇಕಡೆಯಿಂದ 7 ಶೇಕಡಕ್ಕೆ ಹೆಚ್ಚಿಸಲಾಗಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಅನುಸಾರ ಈ ಹೊಸ ಮೀಸಲಾತಿ ಕ್ರಮ ಜಾರಿಗೊಳ್ಳಲಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಎಲ್ಲಾ ಘಟಕಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹುದ್ದೆಗಳ ರೋಸ್ಟರ್ ಪಾಯಿಂಟ್‌ಗಳನ್ನು ಸಿದ್ಧಪಡಿಸಿ ನಿಗದಿತ ಅವಧಿಯೊಳಗೆ ನೇಮಕಾತಿ ವಿಭಾಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಪ್ರಕ್ರಿಯೆಯನ್ನು ಸಮಯಕ್ಕೆ ಪೂರ್ಣಗೊಳಿಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
