ನವದೆಹಲಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಲಂಚ ಪ್ರಕರಣದಲ್ಲಿ ಉತ್ತರಾಖಂಡದ ಮಾಜಿ ಅಬಕಾರಿ ಕಾನ್‌ಸ್ಟೆಬಲ್ ಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ, ಆದರೆ ಅವರಿಗಾಗಿರುವ ವಯಸ್ಸು ಮತ್ತು ಈಗಾಗಲೇ ಕಸ್ಟಡಿಯಲ್ಲಿ ಕಳೆದ ಸಮಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿದೆ.
ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ಪ್ರಸನ್ನ ವರಾಳೆ ಅವರಿದ್ದ ಪೀಠ, ಲಂಚ ಸ್ವೀಕರಿಸಿದ್ದಕ್ಕಾಗಿ ರಾಜ್ ಬಹದ್ದೂರ್ ಸಿಂಗ್ ಎನ್ನುವವರ ಶಿಕ್ಷೆಯನ್ನು ದೃಢಪಡಿಸಿ, ಉತ್ತರಾಖಂಡ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಆದಾಗ್ಯೂ ವಿಚಾರಣಾ ನ್ಯಾಯಾಲಯವು ವಿಧಿಸಿದ ಶಿಕ್ಷೆಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿದೆ.
ಪ್ರಕರಣದ ಹಿನ್ನಲೆ:
ಮೇಲ್ಮನವಿ ಸಲ್ಲಿಸಿದ್ದ ರಾಜ್ ಬಹದ್ದೂರ್ ಸಿಂಗ್, ಉಧಮ್ ಸಿಂಗ್ ನಗರ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಿಷೇಧಿತ ಮದ್ಯ ತಯಾರಿಕೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಕಾಶ್ಮೀರ್ ಸಿಂಗ್ ನೀಡಿದ ದೂರಿನ ಅನ್ವಯಿ ಪ್ರಾಸಿಕ್ಯೂಷನ್ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, 1990 ರ ಜೂನ್ 16 ರಂದು ಗ್ರಾಮದಲ್ಲಿ ದಾಳಿ ನೆಡೆಸಿದ ಸಮಯದಲ್ಲಿ, ಆರೋಪಿಗಳು ದೂರುದಾರರಿಂದ ಕೆಲವು ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿ, ಅಕ್ರಮ ಹಣವಾಗಿ ರೂ. 500 ಕ್ಕೆ ಬೇಡಿಕೆ ಇಟ್ಟರು. ಮೊತ್ತವನ್ನು ಪಾವತಿಸದಿದ್ದರೆ, ನ್ಯಾಯಾಲಯಕ್ಕೆ ಚಲನ್ ಕಳುಹಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದರು.
ಪ್ರಕರಣದ ಕುರಿತು 1990 ರ ಜೂನ್ 18 ರಂದು ಇಲಾಖೆಯ ವಿಜಿಲೆನ್ಸ್ ವಿಭಾಗಕ್ಕೆ ದೂರು ನೀಡಲಾಗಿತ್ತು. ದೂರಿನ ಮೇರೆಗೆ ಖಾಸಗಿ ರೆಸ್ಟೋರೆಂಟ್‌ನಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿತ್ತು. ದೂರುದಾರರಿಗೆ ಫಿನಾಲ್ಫ್ಥಲೀನ್ ಬೆರೆಸಿದ ತಲಾ 100 ರೂ.ಗಳ ಐದು ಕರೆನ್ಸಿ ನೀಡಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿಯಲಾಗಿತ್ತು. ತನಿಖೆಯ ನಂತರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 13(1)(ಡಿ) ಜೊತೆಗೆ ಸೆಕ್ಷನ್ 13(2) ರ ಅಡಿಯಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು.
2006 ರಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ, ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಸೆಕ್ಷನ್ 13 (2) ರ ಅಡಿಯಲ್ಲಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಉತ್ತರಾಖಂಡ ಹೈಕೋರ್ಟ್ 2012 ರಲ್ಲಿ ಶಿಕ್ಷೆಯನ್ನು ಯಥಾವತ್ತಾಗಿ ಎತ್ತಿಹಿಡಿಯಿತು.
ಸುಪ್ರೀಂ ಕೋರ್ಟ್ ಮುಂದೆ ವೈಯಕ್ತಿಕ ದ್ವೇಷದಿಂದಾಗಿ ಮತ್ತು ತಮ್ಮ ಅಕ್ರಮ ಮದ್ಯ ವ್ಯವಹಾರಕ್ಕಾಗಿ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲು ತಮ್ಮನ್ನು ತಪ್ಪಾಗಿ ಆರೋಪಿಸಿದ್ದಾರೆ ಎಂದು ವಾದ ಮಂಡಿಸಲಾಗಿತ್ತು. ಸಾಕ್ಷ್ಯಗಳಲ್ಲಿ ವಿರೋಧಾಭಾಸಗಳಿವೆ ಹಾಗೂ ದೂರುದಾರರು ಮತ್ತು ಪೊಲೀಸರು ಬೇಕಂತಲೇ ಬಲೆ ಹೆಣೆದಿದ್ದಾರೆ ಎಂದೂ ಪ್ರತಿ ಆರೋಪವನ್ನು ಮಾಡಲಾಗಿತ್ತು. ವಾದ ಪ್ರತಿವಾದವನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದ ಉತ್ತರಾಖಂಡ ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದಿದೆ.
