ಯುವಕನೊಬ್ಬ ರಿವಾಲ್ವರ್ ಹಿಡಿದು ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ದೆಹಲಿಯಲ್ಲಿ ನಡೆದಿದೆ. ರಿವಾಲ್ವರ್ ತೆಗೆದು ಬುಲೆಟ್ ಲೋಡ್ ಮಾಡಿದ್ದಾನೆ. ಬಳಿಕ ಲೋಡೆಡ್ ರಿವಾಲ್ವರ್ ಎದೆಗೆ ಇಟ್ಟು ಯಾವುದೇ ಭಯವಿಲ್ಲದಂತೆ ತೋರಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಈ ವೇಳೆ ರಿವಾಲ್ವರ್ ಟ್ರಿಗರ್ ಅಚಾನಕ್ಕಾಗಿ ಒತ್ತಿದ್ದು, ಗುಂಡು ಎದೆ ಸೀಳಿ ಮರುಕ್ಷಣದಲ್ಲೇ ಯುವಕ ಮೃತಪಟ್ಟಿದ್ದಾನೆ.
ದೆಹಲಿಯ ದಲ್ಲುಪುರ ನಿವಾಸಿ ಪವನ್ ತನ್ನ ಗೆಳೆಯನ ಜೊತೆ ರೀಲ್ಸ್ ಮಾಡಲು ಹೋಗಿದ್ದ. ತನ್ನ ಬಳಿ ಇದ್ದ ರಿವಾಲ್ವರ್ ಕುರಿತು ರೀಲ್ಸ್ ಮಾಡಿ ವೈರಲ್ ಆಗಲು ಎಲ್ಲಾ ತಯಾರಿ ನಡೆಸಿದ್ದ. ಇದಕ್ಕೆ ಪವನ್ ನ ಗೆಳೆಯ ಭಯದಿಂದಲೇ ಒಪ್ಪಿಕೊಂಡಿದ್ದಾನೆ. ಪವನ್ ತನ್ನ ಕೈಯಲ್ಲಿರುವ ರಿವಾಲ್ವರ್ ತೆಗೆದು ಬುಲೆಟ್ ಲೋಡ್ ಮಾಡಿ, ತನಗೆ ರಿವಾಲ್ವರ್ ಬಗ್ಗೆ ಎಲ್ಲಾ ಗೊತ್ತು, ಅದನ್ನು ಸುಲಭವಾಗಿ ಭಯವಿಲ್ಲದೆ ನಿಭಾಯಿಸುವುದು ಗೊತ್ತು ಎಂದು ವಿಡಿಯೋ ಮೂಲಕ ತೋರಿಸಿದ್ದಾನೆ.
ಎದೆಗೆ ರಿವಾಲ್ವರ್ ಇಡುವಾಗ ವಿಡಿಯೋ ಶೂಟ್ ಮಾಡುತ್ತಿದ್ದ ಗಳೆಯ ತಕ್ಷಣವೇ ಎಚ್ಚರಿಕೆ ಕೊಟ್ಟಿದ್ದಾನೆ. ಗುಂಡು ಹಾರಿಸಬೇಡ ಎಂದು ಭಯದಿಂದಲೇ ಹೇಳಿದ್ದಾನೆ. ಅಷ್ಟರಲ್ಲೇ ಟ್ರಿಗರ್ ಪ್ರೆಸ್ ಆಗಿ ಗುಂಡು ಎದೆ ಸೀಳಿ ಹೋಗಿದೆ. ಮರುಕ್ಷಣದಲ್ಲೇ ಪವನ್ ನೆಲಕ್ಕುರುಳಿದ್ದು, ಎಲ್ಲಾ ಘಟನೆ ವಿಡಿಯೋದಲ್ಲಿ ದಾಖಲಾಗಿದೆ. ಪವನ್ ಗೆಳೆಯನೇ ಈ ವಿಡಿಯೋ ಸೆರೆ ಹಿಡಿದಿದ್ದಾನೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿಜಕ್ಕೂ ರಿವಾಲ್ವರ್ ಮಿಸ್‌ಫೈರ್ ಆಗಿದೆಯಾ ಅನ್ನೋ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
