ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರಂತೆ ನಟಿಸಿ ಸುಮಾರು 2.9 ಲಕ್ಷ ರೂ ಮೌಲ್ಯದ 4 ಚಿನ್ನದ ಉಂಗುರಗಳನ್ನು ಆಭರಣದ ಅಂಗಡಿಯಿಂದ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೇಗೂರು ಮುಖ್ಯ ರಸ್ತೆಯಲ್ಲಿರುವ ಆಭರಣ ಅಂಗಡಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಾರುತಿ ಜ್ಯುವೆಲ್ಲರ್ಸ್ ಮಾಲೀಕ ಮಂಗಿಲಾಲ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ದೂರಿನಲ್ಲಿ ಮಧ್ಯಾಹ್ನ 2.15 ರ ಸುಮಾರಿಗೆ ಗ್ರಾಹಕರಂತೆ ನಟಿಸುತ್ತಾ ಬಂದ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಚಿನ್ನದ ಉಂಗುರಗಳನ್ನು ತೋರಿಸುವಂತೆ ಕೇಳಿದ. ಆಗ ನಾನು ಹಲವಾರು ಚಿನ್ನದ ಉಂಗುರಗಳನ್ನು ತೋರಿಸಿದೆ, ಆ ವ್ಯಕ್ತಿ ಅವುಗಳನ್ನು ಬೆರಳುಗಳಿಗೆ ಧರಿಸಿ ತನಗೆ ಒಪ್ಪುವುದೇ ಎನ್ನುವುದನ್ನು ನೋಡಿಕೊಂಡನು. ಹೆಚ್ಚಿನ ವಿನ್ಯಾಸಗಳನ್ನು ತೋರಿಸುವಂತೆ ಹೇಳಿದನು. ಇನ್ನಷ್ಟು ಉಂಗುರಗಳನ್ನು ತೆಗೆಯಲು ತಿರುಗಿದಾಗ, ಆ ವ್ಯಕ್ತಿ ಅವಕಾಶವನ್ನು ಬಳಸಿಕೊಂಡು ಸ್ಥಳದಿಂದ ಪರಾರಿಯಾದನು ಎಂದು ಉಲ್ಲೇಖಿಸಿದ್ದಾರೆ.
ಕಳ್ಳತನ ಮಾಡುವ ಮೊದಲು ದುಷ್ಕರ್ಮಿ 5 ನಿಮಿಷಗಳ ಕಾಲ ಅಂಗಡಿಯೊಳಗೆ ಇದ್ದ. 3 ಬಿಳಿ ಕಲ್ಲಿನ ಚಿನ್ನದ ಉಂಗುರಗಳು ಮತ್ತು 1 ಹಸಿರು ಕಲ್ಲಿನ ಉಂಗುರವನ್ನು ಅಪರಿಚಿತ ವ್ಯಕ್ತಿ ತಗೆದುಕೊಂಡು ಪರಾರಿಯಾಗಿದ್ದಾನೆ. ಒಟ್ಟು ಉಂಗುರುಗಳ ತೂಕ 21 ಗ್ರಾಂ ಆಗಿತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.
