Law News

ಬಾಲಕಿ ಅತ್ಯಾಚಾರ ಪ್ರಕರಣವನ್ನು ಪೊಲೀಸರು ನಿರ್ವಹಿಸಿದ ರೀತಿ ಸಂವೇದನಾರಹಿತ: ಸುಪ್ರೀಂ ಕೋರ್ಟ್

Share It

ನವದೆಹಲಿ: ನಾಲ್ಕು ವರ್ಷದ ಬಾಲಕಿಯ ಮೇಲೆ ಜರುಗಿದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಹರಿಯಾಣ ಪೊಲೀಸರು ನಿರ್ವಹಿಸಿದ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆಯನ್ನು ಆಘಾತಕಾರಿ ಮತ್ತು ಸಂವೇದನಾರಹಿತ ಎಂದೂ ಅಸಮಾಧಾನ ವ್ಯಕ್ತಪಡಿಸಿದೆ.

ಆರೋಪಿಗಳ ಸಮ್ಮುಖದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ದಾಖಲಿಸಲಾಗಿದೆ ಎನ್ನುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯ, ಮಾರ್ಚ್ 25 ರಂದು ತನಿಖೆಯ ಸಂಪೂರ್ಣ ದಾಖಲೆಯೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಗುರುಗ್ರಾಮ ಪೊಲೀಸ್ ಆಯುಕ್ತರು ಮತ್ತು ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ ಮತ್ತು ಹರಿಯಾಣ ರಾಜ್ಯದಲ್ಲಿರುವ ಮಹಿಳಾ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಸಲ್ಲಿಸುವಂತೆ ರಾಜ್ಯ ಅಡ್ವೊಕೇಟ್ ಜನರಲ್ ಗೆ ಸೂಚಿಸಿದೆ.

ಹರಿಯಾಣ ಪೊಲೀಸರ ತನಿಖೆ ತೃಪ್ತಿಕರವಾಗಿಲ್ಲ ಆದ್ದರಿಂದ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಕೋರಿ ಮಗುವಿನ ಪೋಷಕರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರುಗಳನ್ನೊಳಗೊಂಡ ಪೀಠ ವಿಚಾರಣೆ ನಡೆಸಿ ಕಟ್ಟುನಿಟ್ಟನ ಸೂಚನೆಗಳನ್ನು ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ತನಿಖಾಧಿಕಾರಿ ಪೋಷಕರನ್ನು ಎಫ್‌ಐಆರ್ ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಆರೋಪಿಗಳು ಮುಂಭಾಗದ ಕೋಣೆಯಲ್ಲಿದ್ದಾಗ ಮ್ಯಾಜಿಸ್ಟ್ರೇಟ್ ಮಗುವಿನ ಹೇಳಿಕೆಯನ್ನು ಪಡೆದಿದ್ದಾರೆ. ಮಗುವನ್ನು ಪೊಲೀಸ್ ಠಾಣೆ, ಮಕ್ಕಳ ಕಲ್ಯಾಣ ಸಮಿತಿ ಕಚೇರಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಆಸ್ಪತ್ರೆಯ ನಡುವೆ ದಿನಗಟ್ಟಲೆ ಓಡಾಡಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು. ವಿಚಾರಣೆಯ ಪೂರ್ವ ಹಂತಗಳನ್ನು ಸೂಕ್ಷ್ಮ ರೀತಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದೂ ಒತ್ತಾಯಿಸಿದರು.


Share It

You cannot copy content of this page