ಪತಿಯನ್ನು ಪುಂಡಪೋಕರಿ ಎಂದು ನಿಂದಿಸಿ, ಪದೇಪದೆ ಕರೆ ಮಾಡಿ ಬೆದರಿಕೆ ಹಾಕುವ ಮೂಲಕ ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಡಿ ರಿಯಲ್ ಎಸ್ಟೇಟ್ ಉದ್ಯಮಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧ ಯಲಹಂಕ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನ್ಯಾಯಾಂಗ ಬಡಾವಣೆ ನಿವಾಸಿ ಎಚ್.ಎಂ ವೆಂಕಟೇಶ್ ಎಂಬುವರು ಕೊಡಿಗೆಹಳ್ಳಿ ಸರ್ವೆ ನಂ 101/2ರ ಸರ್ಕಾರಿ ಜಮೀನನ್ನು ಉದ್ಯಮಿ ವಿ.ಶ್ರೀನಿವಾರಾಜು ಎಂಬುವರು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ 2012ರಲ್ಲಿ ಲೋಕಾಯುಕ್ತ, ಬಿಬಿಎಂಪಿ ಆಯುಕ್ತರು ಮತ್ತು ಬಿಡಿಎಗೆ ದೂರು ನೀಡಿದ್ದರು. ಈ ವಿಚಾರವಾಗಿ ಶ್ರಿನಿವಾಸರಾಜು ದೂರುದಾರ ವೆಂಕಟೇಶ್ ಪತ್ನಿ ಸುಮನಾ ಅವರಿಗೆ ಪದೇ ಪದೇ ಕರೆ ಮಾಡುತ್ತಿದ್ದರು. ಬಳಿಕ ಒತ್ತುವರಿ ವಿಚಾರವಾಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದ ಶ್ರೀನಿವಾಸರಾಜು, ವೆಂಕಟೇಶ್ ಅವರನ್ನು ‘ಪುಂಡ ಪೋಕರಿ’ ಎಂದು ನಿಂದಿಸಿದ್ದರು. ಈ ಮಾತು ಟಿವಿಯಲ್ಲಿ ಪ್ರಸಾರವಾದ ಬಳಿಕ ಸಂಬಂಧಿಕರು ಸುಮನಾಗೆ ಕರೆ ಮಾಡಿ ವಿಚಾರಿಸಿದ್ದರು. ಇದರಿಂದ ಮನನೊಂದ ಸುಮನಾ 2012ರ ಆಗಸ್ಟ್ 16ರಂದು ಆತ್ಮಹತ್ಯೆಗೆ ಶರಣಾಗಿದ್ದರು.
ಪತ್ನಿ ಸುಮನಾ ಸಾವಿನ ಬಳಿಕ ಪತಿ ವೆಂಕಟೇಶ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನಲ್ಲಿ ತನ್ನ ಪತ್ನಿ ಆತ್ಮಹತ್ಯೆಗೆ ಶ್ರೀನಿವಾಸರಾಜುವೇ ಕಾರಣ. ಅವರು ಪತ್ನಿಗೆ ಪದೇ ಪದೇ ಕರೆ ಮಾಡಿ ಬೆದರಿಕೆ ಹಾಕಿದ್ದರು. ಟಿವಿ ವಾಹಿನಿಗೆ ನನ್ನ ವಿರುದ್ಧ ಪುಂಡ ಪೋಕರಿ ಎಂದು ಹೇಳಿಕೆ ನೀಡಿದ್ದರು. ಇವೆಲ್ಲದರಿಂದ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದರು. ಆಯುಕ್ತರ ಸೂಚನೆಯಂತೆ ಯಲಹಂಕ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪದಡಿ ಶ್ರೀನಿವಾಸರಾಜು ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಹಾಗೆಯೇ, ತಮ್ಮನ್ನು ಪುಂಡಪೋಕ್ರಿ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡುವ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಕೋರಿ ನಗರದ ಸಿಎಂಎಂ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ಈ ಎರಡೂ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಶ್ರೀನಿವಾಸರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು: ‘ಪುಂಡ ಪೋಕರಿ’ ಎಂದು ಕರೆಯುವುದು ಮೇಲ್ನೋಟಕ್ಕೆ ಮಾನಹಾನಿಯಲ್ಲ, ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎನ್ನಿಸಬಹುದು. ಆದರೆ, ಶಬ್ದಗಳ ಗ್ರಹಿಕೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವರು ಬೈಗುಳವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದೇ ವೇಳೆ ಸೂಕ್ಷ್ಮ ಮನಸ್ಸಿನವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ದೂರುದಾರರನ್ನು ಪುಂಡ ಪೋಕರಿ ಎಂದು ಶ್ರೀನಿವಾಸರಾಜು ಕರೆದಿರುವುದು ಹಾಗೂ ಪದೇಪದೇ ಕರೆ ಮಾಡಿರುವುದು ದಾಖಲೆಗಳನ್ನು ನೋಡಿದರೆ ತಿಳಿಯುತ್ತದೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೋ ಇಲ್ಲವೋ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲೇ ನಿರ್ಧಾರವಾಗಬೇಕಿದೆ.
ಇನ್ನು, ಪುಂಡಪೋಕರಿ ಪದ ಬಳಕೆ ಮಾನಹಾನಿಕರವೇ ಅಲ್ಲವೇ ಎಂಬುದನ್ನು ಕೂಡ ವಿಚಾರಣಾ ನ್ಯಾಯಾಲಯವೇ ತೀರ್ಮಾನಿಸುವುದು ಸೂಕ್ತ. ಈ ಹಂತದಲ್ಲಿ ಹೈಕೋರ್ಟ್ ಸಿಆರ್ಪಿಸಿ ಸೆಕ್ಷನ್ 482 ಅಧಿಕಾರ ಬಳಸಿ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಶ್ರೀನಿವಾಸರಾಜು ಅರ್ಜಿಗಳನ್ನು ವಜಾ ಮಾಡಿದೆ.
(CRL.P 4770/2015)