ಬೆಂಗಳೂರು: ಇತ್ತೀಚೆಗೆ ಲಂಡನ್ ಪ್ರವಾಸ ಕೈಗೊಂಡಿರುವ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯ ಗಳಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ, ಇದು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ವರದಿಗೆ ತದ್ವಿರುದ್ಧವಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ದುರ್ಗೇಶ್ ಬರಗೂರು ಹೇಳಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಶಿಕ್ಷಣ ನೀತಿ ಆಯೋಗವು ವಿದೇಶಿ ವಿಶ್ವವಿದ್ಯಾಲಯ ಗಳಿಗೆ ಅವಕಾಶ ನೀಡಬಾರದೆಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಉನ್ನತ ಶಿಕ್ಷಣ ಸಚಿವರ ಹೇಳಿಕೆ ರಾಜ್ಯ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಸರಕಾರಿ ವಿಶ್ವ ವಿದ್ಯಾನಿಲಯಗಳಲ್ಲಿ ಅನುದಾನಗಳಿಲ್ಲದೇ, ಅಧ್ಯಾಪಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಂದ ತೀವ್ರವಾಗಿ ಬಳಲುತ್ತಿವೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸುವುದರ ಕಡೆ ಗಮನ ನೀಡುವುದು ಬಿಟ್ಟು, ವಿದೇಶಿ ವಿವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸರ್ಕಾರ ನಿಜವಾಗಿಯೂ ಸಾರ್ವಜನಿಕ ಸಂಸ್ಥೆಗಳನ್ನು ಸುಧಾರಿಸಲು ಬದ್ಧವಾಗಿದ್ದರೆ, ಅದು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು. ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ಬೃಹತ್ ತೆರಿಗೆ ವಿನಾಯಿತಿಗಳನ್ನು ನಿಲ್ಲಿಸಬೇಕು ಮತ್ತು ಶಾಸಕ, ಸಚಿವರ ಸಂಬಳ ಹಾಗೂ ಭತ್ಯೆಗಳನ್ನು ಕಡಿತಗೊಳಿಸಬೇಕು. ಆ ಹಣವನ್ನು ಶಿಕ್ಷಣದ ಸಧೃಡಿಕರಣಕ್ಕೆ ವಿನಿಯೋಗಿಸಬೇಕು. ಎಲ್ಲರಿಗೂ ಉಚಿತ, ಗುಣಮಟ್ಟ ಶಿಕ್ಷಣವನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದಿಂದ ಎನ್‌ಆರ್‌ಐ ಕೋಟಾ ಜಾರಿ:
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್‌ಆರ್‌ಐ ಕೋಟಾವನ್ನು ಜಾರಿಗೊಳಿಸುವ ರಾಜ್ಯ ಸರಕಾರದ ನಿರ್ಧಾರ, ದಲಿತ, ಮಧ್ಯಮ ವರ್ಗದ ಬಡ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ದೂರ ತಳ್ಳುವ ಕುತಂತ್ರವಾಗಿದೆ. ಅಷ್ಟೇ ಅಲ್ಲದೇ, ಸೀಟುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿರುವುದು ಪ್ರಜಾಸತ್ತಾತ್ಮಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯದ ಗುಣಮಟ್ಟದ ತಳಹದಿಯ ಮೇಲೆ ನೇರ ಪ್ರಹಾರವಾಗಿದೆ ಎಂದು ದುರ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.