Law

ಮ್ಯೂಚುಯಲ್ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ನಂತರ ಉಲ್ಟಾ ಹೊಡೆದ ಪತ್ನಿ: ಪತಿ ಮನವಿ ಪುರಸ್ಕರಿಸಿದ ಹೈಕೋರ್ಟ್

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111

ಬೆಂಗಳೂರು: ಪರಸ್ಪರ ಸಮ್ಮತಿ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಷರತ್ತಿನ ಪ್ರಕಾರ ಸೈಟು ಪಡೆದು, ನಂತರ ಪ್ರಕರಣದಲ್ಲಿ ಗೈರು ಹಾಜರಾಗುವ ಮೂಲಕ ಪತ್ನಿ ಉಲ್ಟಾ ಹೊಡೆದಿದ್ದ ಪ್ರಕರಣದಲ್ಲಿ ಹೈಕೋರ್ಟ್ ಪತಿಗೆ ರಿಲೀಫ್ ನೀಡಿದೆ.

ಬೆಂಗಳೂರಿನ ನಿವಾಸಿ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅನು ಶಿವರಾಮನ್ ಹಾಗೂ ನ್ಯಾ. ಉಮೇಶ್ ಎಂ ಅಡಿಗ ಅವರಿದ್ದ ವಿಭಾಗೀಯ ಪೀಠ, ಪತಿಯ ಮನವಿಯಂತೆ ದಂಪತಿಗೆ ವಿಚ್ಛೇದನ ಮಾಡಿ ತೀರ್ಪು ಪ್ರಕಟಿಸಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರಕರಣದಲ್ಲಿ ದಂಪತಿ ಸಮ್ಮತಿಯಿಂದಲೇ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13ರ ಅಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ದಂಪತಿ ಮಾಡಿಕೊಂಡಿದ್ದ ಷರತ್ತಿನಂತೆ ಪತ್ನಿ ನಿವೇಶನ ಪಡೆದಿದ್ದಾರೆ. ವಿಚ್ಛೇದನಕ್ಕೆ ಸಮ್ಮತಿಸಿ ಪಡೆದ ನಿವೇಶನವನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾರಾಟ ಮಾಡಿದ್ದಾರೆ. ಜತೆಗೆ ಸಮ್ಮತಿ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಪ್ರಕರಣದಲ್ಲಿ ಗೈರು ಹಾಜರಾಗುವ ಮೂಲಕ ವಿಚ್ಛೇದನಕ್ಕೆ ಅಸಮ್ಮತಿ ತೋರಿದ್ದಾರೆ.

ಸಮ್ಮತಿ ಮೇರೆಗೆ ದಂಪತಿ ವಿಚ್ಛೇದನ ಕೋರಿದಾಗ ಇಬ್ಬರೂ ಹಾಜರಾಗಬೇಕೆಂದು ನಿರೀಕ್ಷಿಸಿದ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ದಂಪತಿ ಸಮ್ಮತಿಯಿಂದ ಅರ್ಜಿ ಸಲ್ಲಿಸಿದ ಬಳಿಕ ಮೋಸ, ವಂಚನೆ, ಬಲವಂತದಿಂದ ಮತ್ತು ತಪ್ಪು ವಿವರಣೆ ನೀಡುವ ಕಾರಣಗಳನ್ನು ಹೊರುತುಪಡಿಸಿ ಇತರೆ ಯಾವುದೇ ಕಾರಣಕ್ಕೂ ಅರ್ಜಿ ಹಿಂಪಡೆಯಲು ಅವಕಾಶವಿಲ್ಲ. ಆದಾಗ್ಯೂ ಪತ್ನಿಯ ಗೈರು ಹಾಜರಿ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಪತಿಯನ್ನು ಅಸಹಾಯಕ ಸ್ಥಿತಿಯಲ್ಲಿ ಇರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಅಲ್ಲದೇ, ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗಿಲ್ಲ. ಅಲ್ಲದೆ, ಪತ್ರಿಕಾ ಪ್ರಕಟಣೆ ಹೊರಡಿಸಿದ್ದರೂ, ಯಾವುದೇ ಫಲ ನೀಡಿಲ್ಲ. ಅಲ್ಲದೆ, ಪತ್ನಿ ಇಷ್ಟ ಬಂದ ರೀತಿಯಲ್ಲಿ ವರ್ತಿಸಿದಾಗ ಮತ್ತು ನ್ಯಾಯಾಲಯದಿಂದ ದೂರ ಉಳಿದಾಗ ಮೇಲ್ಮನವಿದಾರರ ಹಕ್ಕುಗಳನ್ನು ನಿರಾಕರಿಸಲಾಗದು. ಹೀಗಾಗಿ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: 2005ರಲ್ಲಿ ವಿವಾಹವಾಗಿದ್ದ ದಂಪತಿಗೆ ಓರ್ವ ಗಂಡು ಮಗುವಿದ್ದು ವೈಮನಸ್ಯದಿಂದಾಗಿ ಪತ್ನಿ 2010ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಂತರ ಪತಿ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.

ಒಮ್ಮತದ ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮಾಡಿಕೊಂಡಿದ್ದ ಷರತ್ತಿನಿಂತೆ ಪತಿ ಯಲಹಂಕ ಬಳಿ ಪತ್ನಿಗೆ ನಿವೇಶನ ನೀಡಿದ್ದರು. ಜತೆಗೆ, ಪತಿ ವಿರುದ್ಧದ ಇತರೆ ಪ್ರಕರಣಗಳನ್ನು ಪತ್ನಿ ಹಿಂಪಡೆಯುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸೈಟು ತನ್ನ ಹೆಸರಿಗೆ ಬಂದ ನಂತರ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ರ ಅಡಿ (ಪರಸ್ಪರ ಸಮ್ಮತಿ) ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಅಸಮ್ಮತಿ ಸೂಚಿಸಿದ್ದರು.

ಜತೆಗೆ ಅರ್ಜಿ ವಿಚಾರಣಾ ಹಂತದಲ್ಲಿರುವಾಗ ತಾವು ಪಡೆದಿದ್ದ ನಿವೇಶನವನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದಕ್ಕೆ ಪತ್ನಿ ಮುಂದಾಗಿದ್ದರು. ಸೈಟು ಮಾರಾಟ ಮಾಡದಂತೆ ಪತಿ ನಿರ್ಬಂಧಕಾಜ್ಞೆ ಆದೇಶವನ್ನು ಪಡೆದರೂ ಪತ್ನಿ ನಿವೇಶನವನ್ನು ಮಾರಾಟ ಮಾಡಿದ್ದರು. ವಿಚ್ಛೇದನ ಕೋರಿದ್ದ ಪ್ರಕರಣದ ವಿಚಾರಣೆಗೆ ಪತ್ನಿ ಗೈರಾದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೊರೆಹೋಗಿದ್ದರು.

(MISCELLANEOUS FIRST APPEAL NO. 8506 OF 2022 (FC)


Share It

You cannot copy content of this page