ಲೇಖನ: ಎಸ್ ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು
1983 ರಲ್ಲಿ ಜನತಾ ಪಕ್ಷದ ಅಧ್ಯಕ್ಷ ಚಂದ್ರಶೇಖರ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ಅದು ಯಾವದೇ ರಾಜಕೀಯ ಉದ್ದೇಶ ಹೊಂದಿರಲಿಲ್ಲ.
ಹಿಂದೆ ಯಡಿಯೂರಪ್ಪನವರ ಸರಕಾರ ಇದ್ದಾಗ ಅಂದಿನ ವಿರೋಧಿ ಪಕ್ಷದ ನಾಯಕ, ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದರು. ಅದು ರೆಡ್ಡಿಗಳ ಜೊತೆ ಆದ ವಾಗ್ವಾದದ ಪರಿಣಾಮ. ಕೇವಲ ಹಠಕ್ಕಾಗಿ ನಡೆದ ರಾಜಕೀಯ ಪ್ರೇರಿತ ಪಾದಯಾತ್ರೆ.
ಈಗ ರಾಹುಲ್ ಗಾಂಧಿ ನಡೆಸುತ್ತಾ ಇರುವ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಭಾರತ ಜೋಡೋ ಪಾದಯಾತ್ರೆ ರಾಜಕೀಯ ಉದ್ದೇಶ ಹೊಂದಿದೆ. ಒಂದು ಕಾಲದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರಭಾವ ಹೊಂದಿದ್ದ, ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಅದು ತನ್ನ ತಪ್ಪುಗಳ ಕಾರಣ ದುರ್ಬಲವಾಗಿ ಇಂದು ಕೇವಲ ಕೆಲವೇ ರಾಜ್ಯಗಳಲ್ಲಿ ಅಧಿಕಾರ ಉಳಿದುಕೊಂಡಿದೆ
ಈಗಿನ ಪಾದಯಾತ್ರೆ ರಾಜಕೀಯ ಉದ್ದೇಶ ಹೊಂದಿದೆ, ಆದರೆ ಪಾದಯಾತ್ರೆಗಳು ಜನರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ಊಹೆ ಮಾಡಲು ಸಾಧ್ಯವಿಲ್ಲ.
ಚಂದ್ರಶೇಖರ್ ಅವರು ಪಾದಯಾತ್ರೆ ಮಾಡಿದ ನಂತರ 1983ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಮತ್ತು ಕ್ರಾಂತಿರಂಗ ಹೆಚ್ಚು ಸ್ಥಾನ ಪಡೆದವು. ಮತ್ತು ಬಿಜೆಪಿ ಕೂಡಾ ಹೆಚ್ಚು ಸ್ಥಾನ ಪಡೆಯಿತು. ಆಗ ಬಿಜೆಪಿ ಬಾಹ್ಯ ಬೆಂಬಲ ನೀಡಿದ ಕಾರಣ ಅಂದು ಮೊದಲ ಕಾಂಗ್ರೆಸ್ಸೇತರ ಸರಕಾರ ರಚನೆ ಆಯಿತು.
ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ಧರಾಮಯ್ಯ ಪಾದಯಾತ್ರೆ ಮಾಡಿದ ಕಾರಣ 2013 ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದು ಬರೀ ಪಾದಯಾತ್ರೆ ಪರಿಣಾಮ ಅಲ್ಲ. ಆದರೆ ಬಿಜೆಪಿ ಪ್ರಮಾದಗಳೂ ಇದ್ದವು.
ಇಂದು ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆ ಎಲ್ಲಿ ಜನರ ಮೇಲೆ ಏನು ಪರಿಣಾಮ ಬೀರಬಹುದು ಎನ್ನುವ ವಿಚಾರ ರಾಜಕೀಯ ಸಂಚಲನ ಮೂಡಿಸಿದ್ದು ಸತ್ಯ.
ಗಾಂಧೀಜಿ ಪಾದಯಾತ್ರೆಗಳನ್ನು ಇಂದು ಅವಹೇಳನ ಮಾಡುವ ಹಂತಕ್ಕೆ ರಾಜಕೀಯ ತಲುಪಿದೆ. ಆದರೆ ಆ ಪಾದಯಾತ್ರೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಅದ್ಭುತ ಪರಿಣಾಮ ಬೀರಿದ್ದು ಸುಳ್ಳೇನಲ್ಲ. ಹೀಗಾಗಿ ಪಾದಯಾತ್ರೆ ಬಗ್ಗೆ ಅವಹೇಳನ ಮಾಡುವವರು ಕೂಡಾ ಪಾದಯಾತ್ರೆಯಲ್ಲಿ ಶಕ್ತಿ ಇದೆ ಅಂತ ಭಾವಿಸಿದಂತೆ ಕಾಣುತ್ತದೆ.
ಎಲ್ಲವನ್ನೂ ಬರೀ ಅವಹೇಳನ ಮಾಡುವವರು ಕೂಡಾ ಒಮ್ಮೆ ತಾವೇ ಅವಹೇಳನಕ್ಕೆ ಗುರಿಯಾಗಬಹುದು ಎನ್ನುದನ್ನು ಮರೆಯಬಾರದು. ಪಾದಯಾತ್ರೆ ಎನು ಮಾಡಬಹುದು ಎಂಬುದನ್ನು ಕಾಲ ನಿರ್ಧರಿಸುತ್ತದೆ.
ಜನಜಾಗೃತಿ ಮೂಡಿಸುವಲ್ಲಿ ಪಾದಯಾತ್ರೆಗಳ ಪಾತ್ರ ಅಮೂಲ್ಯ ಎನ್ನುವುದನ್ನು ಮಾತ್ರ ಮರೆಯಲಾಗದು.