News

ಬೆಂಗಳೂರು ವಕೀಲರ ಸಂಘದ ಚುನಾವಣೆ: ಮಹಿಳೆಯರಿಗೆ 33% ಮೀಸಲು ಕೋರಿದ್ದ ಅರ್ಜಿ ವಜಾ

Share It

ಬೆಂಗಳೂರು: ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದ ಮೇಲೆ ಅದರಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ, ಈ ನಿಯಮ ಸೊಸೈಟಿಗಳು ಮತ್ತು ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದಿರುವ ಹೈಕೋರ್ಟ್, ಬೆಂಗಳೂರು ವಕೀಲರ ಸಂಘದ ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನಿಗದಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಸಂಘದಲ್ಲಿ ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲು ಕಲ್ಪಿಸಲು ಬೆಂಗಳೂರು ವಕೀಲರ ಸಂಘಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ಎಎಬಿ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜನವರಿ 2ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಚಾಲ್ತಿಯಲ್ಲಿದೆ. ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡುವಂತ ಆದೇಶವನ್ನು ಯಾವುದೇ ನ್ಯಾಯಾಲಯ ಮಾಡುವಂತಿಲ್ಲ ಎಂಬುದು ಸ್ಥಾಪಿತ ಕಾನೂನು. ಸುಪ್ರೀಂ ಕೋರ್ಟ್‌ ರೂಪಿಸಿರುವ ಈ ಕಾನೂನು ಸೊಸೈಟಿಗಳು ಮತ್ತು ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಎಎಬಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವಂತೆ ನಿರ್ದೇಶಿಸುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.

ಎಎಬಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಮತ್ತು ಜಯ್ನಾ ಕೊಠಾರಿ ವಾದ ಮಂಡಿಸಿ, 6 ತಿಂಗಳ ಹಿಂದೆಯೇ ಮಹಿಳಾ ವಕೀಲರಿಗೆ ಚುನಾವಣೆಯಲ್ಲಿ ಮೀಸಲು ಕಲ್ಪಿಸುವಂತೆ ಎಎಬಿಗೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಎಎಬಿ ಪರಿಗಣಿಸಿಲ್ಲ. ಈಗ ಅವಕಾಶ ತಪ್ಪಿದರೆ ಇನ್ನೂ ಮೂರು ವರ್ಷ ಕಾಯಬೇಕಾಗುತ್ತದೆ ಎಂದು ವಿವರಿಸಿದರು.

ಬೆಂಗಳೂರು ವಕೀಲರ ಸಂಘ ಪ್ರತಿನಿಧಿಸಿದ್ದ ನಿಕಟಪೂರ್ವ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ವಾದ ಮಂಡಿಸಿ, “ಬೈಲಾಗೆ ತಿದ್ದುಪಡಿಯಾಗದೇ ಮಹಿಳಾ ಮೀಸಲಾತಿ ಕಲ್ಪಿಸಲಾಗದು. ಅದಾಗ್ಯೂ, ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ತಾವು ಬದ್ಧವಾಗಿದ್ದೇವೆ. ಆಡಳಿತ ಮಂಡಳಿಯ ಅವಧಿಯು ಕಳೆದ ವರ್ಷದ ಡಿಸೆಂಬರ್‌ 19ಕ್ಕೆ ಕೊನೆಗೊಡಿರುವುದರಿಂದ ಈ ಹಂತದಲ್ಲಿ ಎಎಬಿ ಪರವಾಗಿ ಯಾವುದೇ ಹೇಳಿಕೆ ನೀಡಲಾಗದು” ಎಂದರು.


Share It

You cannot copy content of this page