ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಶಾಲೆಗಳೂ ಸೇರಿದಂತೆ ಎಲ್ಲಾ ಶಾಲೆಗಳು ಕಟ್ಟಡ ಸುರಕ್ಷತಾ ಮತ್ತು ಅಗ್ನಿ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯ ಎಂದಿರುವ ಹೈಕೋರ್ಟ್ ಈ ಬಗ್ಗೆ ವಿವರಗಳನ್ನು ಅಪ್‌ಲೋಡ್ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಒಂದು ಪೋರ್ಟಲ್ ಅಭಿವೃದ್ಧಿಪಡಿಸಬೇಕು ಎಂದು ಆದೇಶಿಸಿದೆ.
ಸರ್ಕಾರದ ಸುತ್ತೋಲೆಯನ್ನು ಹಲವು ಖಾಸಗಿ ಶಾಲೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಏಕ ಸದಸ್ಯಪೀಠ, ಅಗ್ನಿ ಸುರಕ್ಷತಾ ನಿಯಮಗಳ ಪಾಲನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಜತೆಗೆ ನಿಯಮಗಳನ್ನು ಪಾಲನೆ ಮಾಡುತ್ತಿರುವ ಕುರಿತಂತೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಪೋರ್ಟಲ್ ಸಿದ್ದಪಡಿಸಬೇಕು. ಪೋರ್ಟಲ್ ಅಭಿವೃದ್ಧಿ ಪಡಿಸುವ ಕುರಿತಂತೆ ಆರು ವಾರಗಳಲ್ಲಿ ಶಿಕ್ಷಣ ಇಲಾಖೆ ಕ್ರಿಯಾಯೋಜನೆ ಸಿದ್ದಪಡಿಸಿ ಹೈಕೋರ್ಟ್ ಗೆ ಸಲ್ಲಿಸಬೇಕು ಎಂದು ತಿಳಿಸಿದೆ.
ಅಲ್ಲದೆ, ನಿಯಮಗಳನ್ನು ಪಾಲನೆ ಮಾಡಲು ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವವರೆಗೆ ಕಾಲಾವಕಾಶ ನೀಡಲಾಗಿದೆ. ಖಾಸಗಿ ಶಾಲೆಗಳು ಇಷ್ಟು ವರ್ಷದಿಂದ ಶಿಕ್ಷಣ ಸೇವೆ ಒದಗಿಸಿವೆ. ಏಕಾಏಕಿ ಅವುಗಳ ಮೇಲೆ ಒತ್ತಡ ಹೇರಲಾಗದು. ಇಲಾಖೆ ಸಮಯಾವಕಾಶ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
ನಿಯಮ ಎತ್ತಿಹಿಡಿದ ಹೈಕೋರ್ಟ್: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಶಾಲಾ ಕಟ್ಟಡದ ಸುರಕ್ಷತೆ ಪ್ರಮಾಣ ಪತ್ರ ಮತ್ತು ನಕ್ಷೆ ಅನುಮೋದನೆ, ಅಗ್ನಿ ಸುರಕ್ಷತಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಜೂ.6ರಂದು ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಈ ನಿಯಮಗಳನ್ನು ಸರ್ಕಾರಿ ಶಾಲೆಗಳೂ ಸಹ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದೆ.
ಶಾಲೆಯ ಮಾನ್ಯತೆ 10 ವರ್ಷಗಳ ಅವಧಿಗೆ ಇರುತ್ತದೆ. ಆದರೆ ಸರ್ಕಾರ 2022ನೇ ವರ್ಷಕ್ಕೆ ಮಾತ್ರ ಕಟ್ಟಡ ಸುರಕ್ಷತಾ ಪ್ರಮಾಣಪತ್ರ, ನಕ್ಷೆ ಅನುಮೋದನೆ ಮತ್ತು ಅಗ್ನಿ ಶಾಮಕ ಇಲಾಖೆ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಸುತ್ತೋಲೆಯಂತೆ ಶಾಲೆಗಳಿಗೆ ಅಂತಿಮ ಮಾನ್ಯತೆ ನೀಡುವ ಮುನ್ನವೇ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಅದರ ಉದ್ದೇಶ ಶಾಲಾ ಕಟ್ಟಡಗಳಲ್ಲಿ ಬಿಲ್ಡಿಂಗ್ ಬೈಲಾ ಮತ್ತು ಇತರೆ ನಿಯಮಗಳನ್ನು ಪಾಲನೆ ಮಾಡಬೇಕು ಎಂಬುದಾಗಿದೆ ಮತ್ತು ಇಲಾಖೆ ಹೊಸ ಷರತ್ತುಗಳೇನು ವಿಧಿಸಿಲ್ಲ. ಹಾಲಿ ನಿಯಮಗಳಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚನೆ ನೀಡಿದೆ. ಹಾಗಾಗಿ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೀಠ ಹೇಳಿದೆ.
ಶಿಕ್ಷಣ ಇಲಾಖೆ ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ 36ರಡಿ ತಾತ್ಕಾಲಿಕ ಮಾನ್ಯತೆಯನ್ನು ಶಾಲೆಗಳಿಗೆ ನೀಡುತ್ತದೆ ಮತ್ತು ಒಂದು ವರ್ಷದಲ್ಲಿ ನಿಯಮದಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಅಗತ್ಯತೆಗಳನ್ನು ಪೂರೈಸಲೇಬೇಕು. ಅಲ್ಲದೆ, ಶಿಕ್ಷಣ ಇಲಾಖೆಯಲ್ಲಿ ಎಲ್ಲಾ ಷರತ್ತುಗಳನ್ನು ಖಾಸಗಿ ಶಾಲೆಗಳು ಪಾಲನೆ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನ ಹೊಂದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸರ್ಕಾರಿ ಶಾಲೆಗಳಿಗೂ ಅನ್ವಯ: ಶಾಲಾ ಕಟ್ಟಡ ಸುರಕ್ಷತಾ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸುತ್ತಿಲ್ಲ ಎಂಬ ಅರ್ಜಿದಾರರ ವಾದವನ್ನು ಅಂಗೀಕರಿಸಿರುವ ಪೀಠ, ರಾಜ್ಯ ಸರ್ಕಾರ ಖಾಸಗಿ ಶಾಲೆಗಳಿಗೆ ಕೆಲವೊಂದು ನಿಯಮ, ನಿಬಂಧನೆಗಳು ಮತ್ತು ಷರತ್ತುಗಳನ್ನು ವಿಧಿಸಿದಾಗ, ಅವುಗಳನ್ನು ರಾಜ್ಯ ಸರ್ಕಾರ ತನ್ನ ಶಾಲೆಗಳೂ ಸಹ ಪಾಲನೆ ಮಾಡಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಶಾಲಾ ಕಟ್ಟಡ ಸುರಕ್ಷತಾ ನಿಯಮಾವಳಿ, ರಾಷ್ಟ್ರಿಯ ಕಟ್ಟಡ ಕೋರ್ಸ್ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯಿಸುವ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತವೆ. ರಾಜ್ಯ ಸರ್ಕಾರಕ್ಕೆ ವಿನಾಯ್ತಿ ಇಲ್ಲ. ಹಾಗಾಗಿ ಶಿಕ್ಷಣ ಇಲಾಖೆ ಕಾರ್ಯದರ್ಶಿ ಈ ಸಂಬಂಧ ವಿಸ್ತೃತ ಕ್ರಿಯಾ ಯೋಜನೆ ರೂಪಿಸಬೇಕು ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವ ನಿಯಮಗಳನ್ನು ಸರ್ಕಾರಿ ಶಾಲೆಗಳಲ್ಲಿ ಹೇಗೆ ಪಾಲನೆ ಮಾಡುತ್ತದೆ ಎನ್ನುವ ಬಗ್ಗೆ ಯೋಜನೆಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.