ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಆರೋಪಿತ ವ್ಯಕ್ತಿ ದೂರುದಾರನಿಗೆ ಚೆಕ್ ಮೊತ್ತದ ಶೇಕಡಾ 20 ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಚೆಕ್ ಮೊತ್ತದ ಶೇ.20ರಷ್ಟನ್ನು ಮಧ್ಯಂತರ ಪರಿಹಾರವಾಗಿ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ವರ್ಗಾವಣೀಯ ಲಿಖಿತಗಳ ಕಾಯ್ದೆಯ (ಎನ್.ಐ.ಆಕ್ಟ್) ಸೆಕ್ಷನ್ 143-A ರ ಅಡಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ನೀಡುವಂತೆ ಆರೋಪಿಗೆ ಆದೇಶಿಸಲು ಮ್ಯಾಜಿಸ್ಟ್ರೇಟ್ ಗೆ ಅಧಿಕಾರ ನೀಡಲಾಗಿದೆ. ಅದರಂತೆ ಸೆಕ್ಷನ್ 143-A(1) ಅಡಿ ಚೆಕ್ ನೀಡಿದ ವ್ಯಕ್ತಿ ಅಥವಾ ಆರೋಪಿ ತನ್ನ ತಪ್ಪೊಪ್ಪಿಕೊಳ್ಳದಿದ್ದಾಗ ದೂರುದಾರನಿಗೆ ಶೇ.20ರಷ್ಟು ಪರಿಹಾರ ನೀಡಲು ಕೋರ್ಟ್ ಆದೇಶಿಸಬಹುದಾಗಿದೆ.
ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸಿದಾಗ ಆದೇಶ ಹೊರಡಿಸಿದ 60 ದಿನಗಳ ಒಳಗೆ ಆರೋಪಿತ ವ್ಯಕ್ತಿ ಪರಿಹಾರ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಕೋರಿಕೆ ಮೇರೆಗೆ ಈ ಅವಧಿಯನ್ನು 30 ದಿನಗಳಿಗೆ ವಿಸ್ತರಿಸಬಹುದಾಗಿದೆ. ಹೀಗೆ ಮಧ್ಯಂತರ ಪರಿಹಾರ ರೂಪದಲ್ಲಿ ಪಡೆದ ಮೊತ್ತವನ್ನು ಆರೋಪಿ ಖುಲಾಸೆಯಾದಲ್ಲಿ ದೂರುದಾರ 60 ರಿಂದ 90 ದಿನಗಳ ಒಳಗೆ ಬಡ್ಡಿ ಸಹಿತ ಹಿಂಪಾತಿಸಬೇಕಾಗುತ್ತದೆ.
ಹೀಗೆ ಮಧ್ಯಂತರ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದಾಗ ಆರೋಪಿ ಪಾಲಿಸದಿದ್ದರೆ, ದೂರುದಾರನು ಸಿ.ಆರ್.ಪಿ.ಸಿ ಸೆಕ್ಷನ್ 421 ಅಥವಾ 357 ಅಡಿ ಆರೋಪಿಯ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲು, ಪರಿಹಾರ ಕೋರಲು ಕ್ರಮ ಕೈಗೊಳ್ಳಬಹುದಾಗಿದೆ. ಹಾಗೆಂದು ಎನ್ಐ ಆಕ್ಟ್ ನ ಸೆಕ್ಷನ್ 143-A ನಿಯಮವನ್ನು ಮ್ಯಾಜಿಸ್ಟ್ರೇಟ್ ಯಥಾವತ್ತಾಗಿ ಜಾರಿ ಮಾಡಲು ಬರುವುದಿಲ್ಲ.
ಸೆಕ್ಷನ್ 143-A ಅಡಿ ಚೆಕ್ ಬೌನ್ಸ್ ವಿಚಾರವಾಗಿ ದೂರು ದಾಖಲಿಸಿರುವ ವ್ಯಕ್ತಿಗೆ ಪರಿಹಾರ ಪಾವತಿಸಲು ಆರೋಪಿಗೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟ್ ತನ್ನ ಆದೇಶಕ್ಕೆ ಕಾರಣಗಳನ್ನು ದಾಖಲಿಸಬೇಕು. ಕೇವಲ ಆರೋಪಿ ಅಥವಾ ಚೆಕ್ ನೀಡಿದ ವ್ಯಕ್ತಿ ತಪ್ಪೊಪ್ಪಿಕೊಂಡಿಲ್ಲ ಎಂಬ ಏಕೈಕ ಕಾರಣಕ್ಕೆ ಪರಿಹಾರ ನೀಡುವಂತೆ ಆದೇಶಿಸಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಅಲ್ಲದೇ. ಶಾಸನ ನಿರೂಪಕರು ಸೆಕ್ಷನ್ 143-A ನಲ್ಲಿ ಪರಿಹಾರ ನೀಡುವಂತೆ ಆದೇಶಿಸಬಹುದು (may order) ಎಂದು ಹೇಳಿದ್ದಾರೆಯೇ ಹೊರತು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿಲ್ಲ. ಹೀಗಾಗಿ ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸುವಾಗ ಮ್ಯಾಜಿಸ್ಟ್ರೇಟ್ ತಮ್ಮ ನ್ಯಾಯಿಕ ವಿವೇಚನಾಧಿಕಾರ ಬಳಸಬೇಕು. ಆರೋಪಿ ತಪ್ಪೊಪ್ಪಿಕೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಚೆಕ್ ಮೊತ್ತದ 20 ಪರ್ಸೆಂಟ್ ಹಣವನ್ನು ಮಧ್ಯಂತರ ಪರಿಹಾರವಾಗಿ ನೀಡುವಂತೆ ಆದೇಶಿಸಬಾರದು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ಪರಿಚಯವಿರುವ ಮಹಿಳೆಯೊಬ್ಬರು 2 ಕೋಟಿ ರೂಪಾಯಿ ಹಣವನ್ನು ನಗದು ರೂಪದಲ್ಲಿ ಒಂದು ತಿಂಗಳಲ್ಲಿ ಹಿಂದಿರುಗಿಸುವುದಾಗಿ 2020ರ ಡಿಸೆಂಬರ್ ನಲ್ಲಿ ಪಡೆದುಕೊಂಡಿದ್ದರು, ಅದಕ್ಕೆ ಭದ್ರತೆಯಾಗಿ ಚೆಕ್ ನೀಡಿದ್ದರು, ಆದರೆ ಚೆಕ್ ಬ್ಯಾಂಕ್ ನಲ್ಲಿ ಹಣವಿಲ್ಲದೆ ಬೌನ್ಸ್ ಆಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಯಲಬುರ್ಗ ಸಿವಿಲ್ ನ್ಯಾಯಾಲಯದಲ್ಲಿ ಸಿಆರ್ಪಿಸಿ ಸೆಕ್ಷನ್ 200 ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಯುವ ವೇಳೆ ಎನ್ಐ ಆಕ್ಟ್ 143-A ಅಡಿ ಮಧ್ಯಂತರ ಪರಿಹಾರ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ಪರಿಹಾರ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸಿವಿಲ್ ಕೋರ್ಟ್ 2 ಕೋಟಿ ರೂ ಚೆಕ್ ಮೊತ್ತದಲ್ಲಿ ಶೇ 20ರಷ್ಟು ಹಣವಾದ 40 ಲಕ್ಷ ರೂಪಾಯಿಯನ್ನು ಮಧ್ಯಂತರ ಪರಿಹಾರವಾಗಿ ಪಾವತಿಸುವಂತೆ ಚೆಕ್ ನೀಡಿದ್ದ ಮಹಿಳೆ/ಆರೋಪಿಗೆ ಆದೇಶಿಸಿತ್ತು. 60 ದಿನಗಳಲ್ಲಿ 40 ಲಕ್ಷ ಮಧ್ಯಂತರ ಪರಿಹಾರ ಪಾವತಿಸದೇ ಇದ್ದರೆ ದೂರದಾರರು ಸಿಆರ್ಪಿಸಿ ಸೆಕ್ಷನ್ 421 ಹಾಗೂ 357 ರ ಅಡಿ ದೂರುದಾರರು ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದಿತ್ತು. ಈ ಮೇರೆಗೆ ದೂರುದಾರರು ಮಹಿಳೆ ಆಸ್ತಿ ಜಪ್ತಿಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRIMINAL PETITION NO. 100261/2022)