News

ಕಲ್ಪತರು ನಾಡಿನಲ್ಲಿ ಜನವರಿ 18, 19ರಂದು ಎರಡು ದಿನಗಳ ಕಾರ್ಯನಿರತ ಪತ್ರಕರ್ತರ 39ನೇ ರಾಜ್ಯಸಮ್ಮೇಳನ

Share It

ಬೆಂಗಳೂರು: ಕಲ್ಪತರು ನಾಡು ತುಮಕೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಂಘಟನೆ ಆಯೋಜಿಸಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಜನವರಿ 18 ಮತ್ತು 19 ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಬುಧವಾರ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಡಿವಿಜಿ ಸಂಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶತಮಾನೋತ್ಸದತ್ತ ಮುನ್ನಡೆಯುತ್ತಿದ್ದು, ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಉಳ್ಳ ದೇಶದ ಏಕೈಕ ಬೃಹತ್ ಸಂಘಟನೆಯಾಗಿದೆ. ಪತ್ರಕರ್ತರು ಎದುರಿಸುತ್ತಿರುವ ವೃತ್ತಿ ಪರ ಸಮಸ್ಯೆಗಳು , ಆರೋಗ್ಯ, ಪ್ರೋತ್ಸಾಹಕ ಯೋಜನೆಗಳ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲು ಸಮ್ಮೇಳನ ಸಮರ್ಥ ವೇದಿಕೆಯಾಗಿದೆ ಎಂದು ಹೇಳಿದರು

ಈ ಎಲ್ಲಾ ಸಂಘಟನಾತ್ಮಕ ಚಟುವಟಿಕೆಗಳನ್ನು ವಾರ್ಷಿಕ ಸಮ್ಮೇಳನಗಳಲ್ಲಿ ಮಂಥನ ಮಾಡುವ ಅವಕಾಶವನ್ನು ಸೃಷ್ಟಿಕೊಳ್ಳಲಾಗಿದೆ. ಪತ್ರಿಕೋದ್ಯಮ, ಪತ್ರಕರ್ತರು ಸೇರಿದಂತೆ ನ್ಯೂಸ್ ರೂಂ ನ ಎಲ್ಲಾ ಆಯಾಮಗಳ ಕುರಿತು ಚಿಂತನ-ಮಂಥನ ಮಾಡುವುದು , ಈ ಮೂಲಕ ಪತ್ರಿಕೋದ್ಯಮದ ಸಮಗ್ರ ಹಿನ್ನೋಟ, ಮುನ್ನೋಟಗಳನ್ನು ಕಾಣುವುದು ಸಮ್ಮೇಳನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ಜನವರಿ 18 ರಂದು ಬೆಳಗ್ಗೆ 8.30ಕ್ಕೆ ತುಮಕೂರಿನ ಟೌನ್ ಹಾಲ್ ಬಿಜಿಎಸ್ ವೃತ್ತದಿಂದ ಪತ್ರಕರ್ತರ ಸಾಂಸ್ಕೃತಿಕ ಮೆರಗಿನ ಮೆರವಣಿಗೆಯನ್ನು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಜಿ ಪರಮೇಶ್ವರ್ ಉದ್ಘಾಟಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಡಾ. ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಡಾ. ಶ್ರೀವಿರೇಶಾನಂದ ಸರಸ್ವತಿ ಸ್ವಾಮೀಜಿ, ಸ್ವಾಮಿ ಜಪಾನಂದಜೀ ಸಾನಿಧ್ಯ ವಹಿಸಲಿದ್ದಾರೆ. ಅದೇ ದಿನ ಬೆಳಗ್ಗೆ 11 ಗಂಟೆಗೆ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ತುಮಕೂರು ಜಿಲ್ಲೆಯ ಹಾಲಿ ಶಾಸಕರು, ಮಾಜಿ ಶಾಸಕರು, ಸಂಸದರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಕೆ.ಎನ್ ರಾಜಣ್ಣ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಆತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಸಮಿತಿ ಸದಸ್ಯ ದೇವರಾಜು, ಬೆಂಗಳೂರು ಘಟಕದ ಶಿವರಾಜು ಮತ್ತಿತರರು ಹಾಜರಿದ್ದರು.


Share It

You cannot copy content of this page