News

ನಗರದ 250 ಸ್ಥಳಗಳಲ್ಲಿ ಸಮುದಾಯ ಪ್ರಾಣಿಗಳ ಕುರಿತು ಜಾಗೃತಿ ಅಭಿಯಾನ

Share It

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮುದಾಯ ಪ್ರಾಣಿಗಳ ಕುರಿತು ನಾಗರೀಕರಲ್ಲಿ ಅರಿವು ಮೂಡಿಸಲು ನಗರದ 250 ಸ್ಥಳಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆಯ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ಬಿಬಿಎಂಪಿ ಪಶುಪಾಲನೆ ವಿಭಾಗದಿಂದ ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕ ಆರೋಗ್ಯದ ಶೀರ್ಷಿಕೆಯಡಿ ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಇಂದು ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮುದಾಯ ಪ್ರಾಣಿಗಳಿಗಾಗಿ ಪಾಲಿಕೆಯ ಪಶುಪಾಲನಾ ವಿಭಾಗದಿಂದ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಪ್ರಾಣಿಗಳ ಕುರಿತು ಯಾವೆಲ್ಲಾ ಕಾಯ್ದೆಗಳಿವೆ, ನಾಗರೀಕರು ಏನು ಮಾಡಬಹುದು-ಏನು ಮಾಡಬಾರದು, ಏನಾದರು ಸಮಸ್ಯೆಯಾದರೆ ಯಾರನ್ನು ಸಂಪರ್ಕಿಸಬೇಕು ಸೇರಿದಂತೆ ಇನ್ನಿತ್ಯಾದಿ ವಿಷಯಗಳ ಕುರಿತು ನಾಗರೀಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ನಾಗರೀಕರಿಂದ ಸಮುದಾಯದ ಪ್ರಾಣಿಗಳಿಗೆ ಆಗುವ ಸಮಸ್ಯೆಗಳನ್ನು ತಪ್ಪಿಸಲು, ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಅದಲ್ಲಿ ಯಾವ ರೀತಿ ಪಾಲ್ಗೊಳ್ಳಬೇಕು. ಮುನುಷ್ಯರಂತೆಯೇ ಪ್ರಾಣಿಗಳು ಕೂಡಾ ಎಂಬುದನ್ನು ಅರಿತು ಅವುಗಳ ಜೊತೆ ಕೂರತೆಯಿಂದ ವರ್ತಿಸದೆ ಸೌಹಾರ್ದತೆಯಿಂದಿರುವುದನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಾಗೃತಿ ಅಭಿಯಾನಗಳ ಕಾರ್ಯಕ್ರಮದ ವೇಳಾಪಟ್ಟಿಯನ್ನು ಪಶುಪಾಲನಾ ವಿಭಾಗದ ಸಾಮಾಜಿಕ ಜಾಲತಾಣ Instagram ಹ್ಯಾಂಡಲ್ @bbmp_animalhusbandry ನಲ್ಲಿ ಹಾಕಲಾಗಿದ್ದು, ಅದರಲ್ಲಿ ಎಲ್ಲಾ ಮಾಹಿತಿ ಲಭ್ಯವಿರಲಿದೆ. ನಗರದ ಎಲ್ಲಾ 8 ವಲಯಗಳಲ್ಲಿ ಸಮುದಾಯದ ಪ್ರಾಣಿಗಳ ಕುರಿತು ಬೀದಿ ನಾಟಕ, ನೃತ್ಯದ ಮೂಲಕ ನಾಗರೀಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಬಿತ್ತಿಪತ್ರಗಳನ್ನು ಕೂಡಾ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಾಣಿಗಳನ್ನು ಸ್ಥಳಾಂತರಿಸುವುದು ಅಥವಾ ಅವುಗಳಿಗೆ ಆಹಾರ ಮತ್ತು ನೀರು ಸಿಗದಂತೆ ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು ಬಿ.ಎನ್.ಎಸ್ ಸೆಕ್ಷನ್ 325 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಪ್ರಾಣಿಗಳಿಗೆ ಆಹಾರ ನೀಡುವವರಿಗೆ ಕಿರುಕುಳ ನೀಡುವುದು, ಅವರ ಮೇಲೆ ಗುಂಪು ಹಲ್ಲೆ ಮಾಡುವುದು ಮತ್ತು ಅವುಗಳಿಗೆ ಆಹಾರ ನೀಡುವುದನ್ನು ತಡೆಯುವುದು ಕ್ರಿಮಿನಲ್ ಬೆದರಿಕೆಯ ಅಡಿಯಲ್ಲಿ ಶಿಕ್ಷಾರ್ಹ ಮತ್ತು 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಹೇಳಿದರು.

ಈ ವೇಳೆ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಎಲ್ಲಾ ವಲಯಗಳ ಸಹಾಯಕ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Share It

You cannot copy content of this page