News

ಪಿಟಿಸಿಎಲ್ ಕಾಯ್ದೆಯಡಿ ಭೂ ಹಕ್ಕುಗಳ ಮರು ಸ್ಥಾಪನೆ; ನಿಯಮ ಪಾಲನೆ ಕಡ್ಡಾಯ: ಹೈಕೋರ್ಟ್

Share It

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇಧ) ಪಿಟಿಸಿಎಲ್ ಕಾಯಿದೆ ಅಡಿಯಲ್ಲಿ ಮಂಜೂರಾದ ಜಮೀನನ್ನು ಮಾರಾಟದ ಬಳಿಕ ಹಕ್ಕುಗಳ ಪುನರ್ಸ್ಥಾಪನೆಗೆ ಎಸಿ ಮುಂದೆ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಿಸದೆ, ಜಿಲ್ಲಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದಲ್ಲಿ ಪರಿಗಣಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಪರಿಶಿಷ್ಟ ಜಾತಿಗೆ ಸೇರಿದ ದಕ್ಯನಾಯ್ಕ್ ಅವರ ಕಾನೂನು ವಾರಸುದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಜಮೀನು ಖರೀದಿ ಮಾಡಿದ ಜವರಪ್ಪ ಎಂಬುವರು ಉಪವಿಭಾಗಾಧಿಕಾರಿಗಳು ನೊಟೀಸ್ ನೀಡಿದ ತಕ್ಷಣ ಅವರು ಅದಕ್ಕೆ ಪ್ರತಿಕ್ರಿಯಿಸಬೇಕಾಗಿತ್ತು. ಆದರೆ, ಅವರು ಉತ್ತರಿಸದ ಹಿನ್ನೆಲೆ ಏಕ ಪಕ್ಷೀಯವಾಗಿ ಆದೇಶ ನೀಡಿದ್ದಾರೆ. ಅಲ್ಲದೆ, ಉಪವಿಭಾಗಾಧಿಕಾರಿಗಳ ಮುಂದೆ ಆಕ್ಷೇಪಿಸದೆ ಜಿಲ್ಲಾಧಿಕಾರಿಗಳ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಸ್ತಾಪಿತ ಜಮೀನು ತಮ್ಮ ವಶದಲ್ಲಿದ್ದು, ಅದರ ಹಕ್ಕುಗಳನ್ನು ಮುಂದುವರೆಸಲು ಕೋರಿದ್ದಾರೆ. ಆದರೆ, ಜಿ.ಎಂ ವೆಂಕಟರೆಡ್ಡಿ ಪ್ರಕರಣದಲ್ಲಿ ತಮ್ಮ ಹಕ್ಕುಗಳನ್ನು ಪುನರ್ಸ್ಥಾಪಿಸಲು ಪ್ರಾಥಮಿಕ ಹಂತದ ವಿಚಾರಣೆಗೆ ಎಸಿ ನ್ಯಾಯಾಲಯದಲ್ಲಿ ಆಕ್ಷೇಪಿಸಬೇಕು ಎಂಬುದಾಗಿ ಹೈಕೋರ್ಟ್‌ನ ಮತ್ತೊಂದು ಪೀಠ ಆದೇಶಿಸಿದೆ.

ಪ್ರಸ್ತುತದ ಪ್ರಕರಣದಲ್ಲಿ ಅರ್ಜಿದಾರರು ಜಮೀನನ್ನು 1963ರಲ್ಲಿ ಮಾರಾಟ ಮಾಡಿದ್ದಾರೆ. ಅದಾದ ಬಳಿಕ 1967ರಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಪ್ರಕ್ರಿಯೆ ಮಾರಾಟ ಮಾಡಿದ 5 ವರ್ಷಗಳ ನಂತರ ಪ್ರಾರಂಭವಾಗಿದೆ. ಆದ್ದರಿಂದ ನಕ್ಕಂಟಿ ರಾಮಲಕ್ಷ್ಮಿ ಪ್ರಕರಣದ (ಮಾರಾಟ ಮಾಡಿದ 25 ವರ್ಷಗಳ ಬಳಿಕ ಪ್ರಶ್ನಿಸುವಂತಿಲ್ಲ) ಆದೇಶ ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ. ಹೀಗಾಗಿ, ಅರ್ಜಿಯನ್ನು ಪುರಸ್ಕರಿಸುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ಭದ್ರಾವತಿ ತಾಲೂಕಿನ ಮೊಸರಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 20/6ರಲ್ಲಿ 3 ಎಕರೆ ಜಮೀನು ದಕ್ಯನಾಯಕ್ ಎಂಬುವರಿಗೆ 1967 ರಲ್ಲಿ ದರ್ಕಸ್ಥ್ ನಿಯಮಗಳ ಮೂಲಕ ಮಂಜೂರು ಮಾಡಿ 15 ವರ್ಷಗಳ ಕಾಲ ಪರಾಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಈ ಮೂರು ಎಕರೆ ಜಮೀನನ್ನು ಕೃಷ್ಣ ಬಾಯಿ ಎಂಬುವರಿಗೆ ಮಾರಾಟ ಮಾಡಿದ್ದರು. ಅದರಲ್ಲಿ ಕೃಷ್ಣ ಬಾಯಿ ಎಂಬುವರು 1 ಎಕರೆ ಜಮೀನನ್ನು ಜವರಪ್ಪ ಎಂಬುವರಿಗೆ 1967 ರಲ್ಲಿ ಮಾರಾಟ ಮಾಡಿದ್ದರು.

ಇದಾದ ಬಳಿಕ ದಕ್ಯ ನಾಯಕ್ ಶಿವಮೊಗ್ಗದ ಉಪವಿಭಾಗಾಧಿಕಾರಿಗಳ ಮುಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿಷೇದ) ಕಾಯ್ದೆ 1978 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ಸಲ್ಲಿಸಿದ್ದ ವರದಿಯನ್ವಯ ಪ್ರಕರಣದಲ್ಲಿ ಜಮೀನು ಖರೀದಿ ಮಾಡಿದ್ದ ವ್ಯಕ್ತಿ ಜವರಪ್ಪ ಅವರಿಗೆ ನೊಟೀಸ್ ಜಾರಿ ಮಾಡಿದ್ದರು. ಅಲ್ಲದೆ, ಅರ್ಜಿದಾರರು ತಮ್ಮ ಆಸ್ತಿಯನ್ನು ನಿಮಗೆ ಮಾರಾಟ ಪತ್ರವನ್ನು ಏಕೆ ರದ್ದು ಮಾಡಬಾರದು ಎಂದು ತಿಳಿಸಲು ಸೂಚನೆ ನೀಡಿದ್ದರು. ಆದರೆ, ಜವರಾಯಪ್ಪ ನೊಟೀಸ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ಉಪವಿಭಾಗಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ವಿಚಾರಣಾ ಪ್ರಕ್ರಿಯೆ ಮುಂದುವರೆಸಿ, ಜಮೀನನ್ನು ಮಂಜೂರದಾರರ ವಶಕ್ಕೆ 1984 ರಲ್ಲಿ ಹಿಂದಿರುಗಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಜವರಪ್ಪ, ಜಿಲ್ಲಾಧಿಕಾರಿಗಳು ಮತ್ತು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಜಾಗೊಳಿಸಿದ ಬಳಿಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಹೈಕೋರ್ಟ್ಗೆ ಹಿಂದಿರುಗಿಸಿ, ಅರ್ಜಿದಾರರ ಮನವಿಗಳನ್ನು ಆಲಿಸಿ ಸೂಕ್ತ ಆದೇಶ ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಏಕ ಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ದಕ್ಯನಾಯಕ್ ಅವರ ಕಾನೂನು ವಾರಸುದಾರರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.


Share It

You cannot copy content of this page