ಬೆಂಗಳೂರು: ಸರ್ಕಾರಿ ಉದ್ಯೋಗಿಗಳು ಲಂಚವನ್ನು ಪಡೆದರೆ ಅವರನ್ನು ಸೇವೆಯಿಂದ ವಜಾಗೊಳಿಸುವುದು ಸರಿಯಾದ ಶಿಕ್ಷೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಹಾಗೂ ಡಿ.ರಾಮಚಂದ್ರ ಹುದ್ದಾರ ಅವರ ದ್ವಿಸದಸ್ಯ ನ್ಯಾಯಪೀಠ ಈ ಅಭಿಪ್ರಾಯವನ್ನು ಲೋಕಾಯುಕ್ತ ಮತ್ತು ರಾಜ್ಯ ಸರಕಾರ ಕೆಎಟಿ ತೀರ್ಪಿನ ವಿರುದ್ಧ ಅರ್ಜಿಯನ್ನು ಪುರಸ್ಕರಿಸಿ ಈ ಆದೇಶವನ್ನು ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ಉದಾರಿಸಿರುವ ನ್ಯಾಯಪೀಠ ಲಂಚ ಸ್ವೀಕರಿಸಿದ ವಿಚಾರ ಸಾಬೀತಾಗಿ ಶಿಸ್ತು ಪ್ರಾಧಿಕಾರ ನೀಡಿದ ತೀರ್ಪನ್ನು ಮಾರ್ಪಡಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಕರ್ನಾಟಕ ನ್ಯಾಯಮಂಡಳಿಯ ಆದೇಶವನ್ನು ಬದಿಗಿರಿಸಿ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲೂಕಿನ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಪ್ರಭು ಎಂಬಾತ 2010 ರಲ್ಲಿ ವಿದಾರ್ಥಿನಿಯಿಂದ 20 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದಿದ್ದ. ಇಲಾಖಾ ವಿಚಾರಣೆಯಲ್ಲಿ ಆರೋಪ ಸಾಬೀತಾದ ಕಾರಣ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಅರ್ಜಿಯನ್ನು ಪ್ರಸ್ಕರಿಸಿದ್ದ ಕೆಎಟಿ ಕಡ್ಡಾಯ ನಿವೃತ್ತಿಯನ್ನಾಗಿ ಮಾರ್ಪಡಿಸುವಂತೆ ಇಲಾಖೆಗೆ ಆದೇಶವನ್ನು ನೀಡಿತ್ತು.
ಕೆಎಟಿ ಆದೇಶವನ್ನು ಪ್ರಶ್ನಿಸಿ ಶಿಕ್ಷಣ ಇಲಾಖೆ ಹಾಗು ಲೋಕಾಯುಕ್ತ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಯ ಪರ ವಕೀಲರು ಒತ್ತಾಯಪೂರ್ವಕವಾಗಿ ತನ್ನ ಕಕ್ಷಿದಾರ ಹಣವನ್ನು ಪಡೆದಿಲ್ಲ. ದೂರುದಾರರೇ ಹಣವನ್ನು ನೀಡಿ ಸಿಕ್ಕಿ ಹಾಕಿಸಿದ್ದಾರೆ ಎಂದು ವಾದವನ್ನು ಮಂಡಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಯಾವುದೇ ಕಾರಣಕ್ಕೆ ಅಥವಾ ಯಾವುದೇ ರೂಪದಲ್ಲಿ ಸರ್ಕಾರಿ ಸೇವೆಯಲ್ಲಿರುವ ನೌಕರ ಲಂಚವನ್ನು ಪಡೆದರೆ ಅದಕ್ಕೆ ಕೆಲಸದಿಂದ ತಗೆದು ಹಾಕುವುದು ಸರಿಯಾದ ಶಿಕ್ಷೆಯಾಗಿದೆ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದೆ.