News

ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ಮಾಡಿದರೆ ಕ್ರಮ ಕೈಗೊಳ್ಳಿ: ಹೈಕೋರ್ಟ್

Share It

ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಅನುಯಾಯಿಗಳಿಗೆ ಆದೇಶ ನೀಡಿದೆ.

ಈ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ, ಸಾರ್ವಜನಿಕ ಸಭೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಸದಸ್ಯರು, ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಅಪಪ್ರಚಾರ ಅಥವಾ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿದೆ.

ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ, ಮಾನಹಾನಿ ಮಾಡಿದ್ದನ್ನು ಪರಿಗಣಿಸಿರುವ ಹೈಕೋರ್ಟ್ ಈ ಆದೇಶ ನೀಡಿದೆ.

ಅರ್ಜಿ ವಿಚಾರಣೆ ವೇಳೆ, ಮಹೇಶ್ ಶೆಟ್ಟಿ ತಿಮರೋಡಿ ಬೇಷರತ್ ಕ್ಷಮೆ ಯಾಚಿಸಿ ಅಫಿಡವಿಟ್ ಸಲ್ಲಿಸಿದ್ದರೂ ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹಚರರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ, ಸಭೆ-ಸಮಾರಂಭಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳು, ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳದ ಸಂಸ್ಥೆಗಳು, ನ್ಯಾಯಾಂಗ ನಿಂದನೆ, ಅಪಪ್ರಚಾರ, ಮಾನಹಾನಿ ಮಾಡಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಲಾಗಿದೆ.


Share It

You cannot copy content of this page