ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರನ್ನು ಕೇಂದ್ರ ಸರ್ಕಾರವು ಮೂರು ವರ್ಷಗಳ ಕಾಲ ಸರ್ಕಾರದ ಎಲ್ಲಾ ನೇಮಕಾತಿಗಳಿಂದ ಡಿಬಾರ್ ಮಾಡಿ ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ನವೆಂಬರ್ 7ರಂದು ಡಿಬಾರ್ ಮಾಡಿರುವ ಆದೇಶ ಪ್ರಶ್ನಿಸಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಎಸ್ಟಾಬ್ಲಿಷ್‌ಮೆಂಟ್ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿದೆ.
ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಕೇಂದ್ರ ಸರ್ಕಾರ ಸಿಎಟಿ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಆದರೆ ನ್ಯಾ. ದೇಸಾಯಿ ಅವರು ಮುಡಾ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದರಿಂದ, ಈ ಸ್ಥಾನವನ್ನು ನಿರಾಕರಿಸಿದ್ದರು. ಆದರೂ ಸಹ ಕೇಂದ್ರ, ಸಿಎಟಿ ಸದಸ್ಯರಾಗಿ ನೇಮಕವಾದ 30 ದಿನಗಳಲ್ಲಿ ಹುದ್ದೆ ಸ್ವೀಕರಿಸಬೇಕು. ಸ್ವೀಕರಿಸದೇ ನಿಯಮ ಉಲ್ಲಂಘಿಸಿದ್ದಕ್ಕೆ 3 ವರ್ಷ ಇತರೆ ಯಾವುದೇ ಹುದ್ದೆ ಸ್ವೀಕರಿಸದಂತೆ ದೇಸಾಯಿ ಅವರಿಗೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
ನ್ಯಾ. ದೇಸಾಯಿ ಪರ ವಕೀಲರ ವಾದವೇನು: ಅರ್ಜಿದಾರ ನ್ಯಾ. ದೇಸಾಯಿ ಪರ ವಕೀಲರು, ಅರ್ಜಿದಾರರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಹೈದರಾಬಾದ್ ಪೀಠದ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕೆ ರಾಷ್ಟ್ರಪತಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಆಗಸ್ಟ್ 14ರಂದು ಪತ್ರ ಬರೆದಿದ್ದಾರೆ. ಇದರಲ್ಲಿ ಮುಡಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನೀಡಿರುವ ಜವಾಬ್ದಾರಿ ನಿಭಾಯಿಸುತ್ತಿದ್ದು, ಆರು ತಿಂಗಳಲ್ಲಿ ಜವಾಬ್ದಾರಿ ಮುಗಿಯಲಿದೆ. ಹೀಗಾಗಿ, ಸದ್ಯಕ್ಕೆ ಕೇಂದ್ರ ಸರ್ಕಾರದ ನೇಮಕಾತಿಯನ್ನು ನಿರಾಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು.
ಅಲ್ಲದೇ, ನೇಮಕಾತಿ ಪ್ರಸ್ತಾವವನ್ನು ಸಂಪುಟ ನೇಮಕಾತಿ ಸಮಿತಿಗೆ ಕಳುಹಿಸುವುದಕ್ಕೂ ಮುನ್ನ ಆಯ್ಕೆಯಾಗಿರುವವರ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ಇದಾದ ಬಳಿಕ 30 ದಿನಗಳಲ್ಲಿ ನೇಮಕವಾದವರು ಕರ್ತವ್ಯಕ್ಕೆ ಹಾಜರಾಗದಿದ್ದರೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡಬೇಕು. ಅದಾಗ್ಯೂ ಅವರೂ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಡಿಬಾರ್ ಮಾಡಬಹುದು. ಆದರೆ, ಅರ್ಜಿದಾರರು ಆಯ್ಕೆಯಾದ ಬಳಿಕ ಅವರ ಒಪ್ಪಿಗೆ ಪಡೆದಿಲ್ಲ, ಡಿಬಾರ್ ಮಾಡುವುದಕ್ಕೂ ಮುನ್ನ ನೋಟಿಸ್ ಸಹ ನೀಡಿಲ್ಲ. ಅರ್ಜಿದಾರರನ್ನು ಸಿಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡುವುದರಿಂದ ಡಿಬಾರ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿದೆ. ಹೀಗಾಗಿ, ಡಿಬಾರ್ ಮಾಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಪೀಠಕ್ಕೆ ಕೋರಿದರು.
ಅರ್ಜಿದಾರರು ಸಿಎಟಿಗೆ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಾದ ಆರು ತಿಂಗಳು ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಈ ಮಧ್ಯೆ, ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರ ಅರ್ಜಿದಾರರ ನೇತೃತ್ವದಲ್ಲಿ ಏಕ ಸದಸ್ಯ ನ್ಯಾಯಾಂಗ ಆಯೋಗ ರಚಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಸಿಎಟಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ನೇಮಕಾತಿ ಪತ್ರ ಕಳುಹಿಸಿತ್ತು. ಮುಡಾ ಹಗರಣದ ತನಿಖೆಗೆ ಆರು ತಿಂಗಳ ಗಡುವು ನೀಡಿದ್ದು, ಅದು ಮುಗಿದ ಬಳಿಕ ಸಿಎಟಿ ಜವಾಬ್ದಾರಿ ಪಡೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕೇಂದ್ರ ಸರ್ಕಾರವು ಅರ್ಜಿದಾರರನ್ನು ಮೂರು ವರ್ಷಗಳ ಕಾಲ ಡಿಬಾರ್ ಮಾಡಿದೆ ಎಂದು ಎಂದು ಪೀಠಕ್ಕೆ ತಿಳಿಸಿದರು.
ಅಲ್ಲದೇ, ಅರ್ಜಿದಾರರ ವಾದವನ್ನು ಆಲಿಸದೇ ಡಿಬಾರ್ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಆದೇಶದಲ್ಲಿ ವೈಯಕ್ತಿಕ ಕಾರಣಕ್ಕೆ ಹೈದರಾಬಾದ್ ಸಿಎಟಿ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಆಕ್ಷೇಪಾರ್ಹ ಆದೇಶದಲ್ಲಿ ವಿವರಿಸಲಾಗಿದೆ. ಇಲ್ಲಿ ಯಾವುದೇ ವೈಯಕ್ತಿಕ ಕಾರಣಗಳು ಇಲ್ಲ. ಮುಡಾ ಹಗರಣದ ತನಿಖಾ ಜವಾಬ್ದಾರಿ ಮುಗಿಸಿ, ಸಿಎಟಿ ನೇಮಕಾತಿ ಒಪ್ಪಿಕೊಳ್ಳುವುದಾಗಿ ಅಲ್ಲಿಯವರೆಗೆ ನೇಮಕಾತಿ ಮುಂದೂಡುವಂತೆ ಪತ್ರ ಬರೆಯಲಾಗಿದೆ. ಆದರೆ ವೈಯಕ್ತಿಕ ಸಮಾಲೋಚನೆ ನಡೆಸದೇ ಡಿಬಾರ್ ಮಾಡಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.