ಬೆಂಗಳೂರು: ನಗರದ ನಾಯಂಡಹಳ್ಳಿ ಕೆರೆಯ ಮುಖ್ಯದ್ವಾರದ ಬಳಿ 2.25 ಗುಂಟೆ ಒತ್ತುವರಿಯಾಗಿದ್ದ ಪ್ರದೇಶವನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಪಶ್ಚಿಮ ವಲಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಂಡಹಳ್ಳಿ ಕೆರೆ ಮೈಸೂರು ರಸ್ತೆಗೆ ಹೊಂದಿಕೊಂಡಂತಿದೆ. ಮುಖ್ಯದ್ವಾರದ ಬಳಿ 2.25 ಗುಂಟೆ ಪ್ರದೇಶದಲ್ಲಿ ಶೀಟಿನ ಶೆಡ್ ಹಾಕಿಕೊಂಡು ಟಿಂಬರ್ ಶಾಪ್ ನಡೆಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಪಾಲಿಕೆ ಕೆರೆಗಳ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ನಿರ್ದೇಶನದ ಮೇರೆಗೆ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿದರು.
ಒತ್ತುವರಿಯಾಗಿದ್ದ 2.25 ಗುಂಟೆ ಪ್ರದೇಶವನ್ನು ಈ ಮೊದಲೇ ಭೂಮಾಪಕರು ಸರ್ವೇ ನಡೆಸಿ ಗಡಿಯನ್ನು ಗುರುತಿಸಿದ್ದರು. ಈ ಸಂಬಂಧ ಒತ್ತುರಿಯಾಗಿದ್ದ ಜಾಗವನ್ನು ಕೂಡಲೆ ತೆರವು ಮಾಡಲು ಟಿಂಬರ್ ಶಾಪ್ ನವರಿಗೆ ತಿಳಿಸಲಾಗಿತ್ತು, ಸ್ವಯಂಪ್ರೇರಿತವಾಗಿ ಅವರೇ ಶೆಡ್ ಹಾಗೂ ಟಿಂಬರ್ ಗಳನ್ನು ತೆರವುಗೊಳಿಸಿದ್ದರು. ಟಿಂಬರ್ ಶಾಪ್ ತೆರವುಗೊಳಿಸಿದ ಜಾಗಕ್ಕೆ ಕೂಡಲೆ ಫೆನ್ಸಿಂಗ್ ಕೂಡ ಹಾಕಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಚರಣ್ ರಾಜ್, ಕಾರ್ಯಪಾಲಕ ಅಭಿಯಂತರ ರವಿ, ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.