News

ಬಿಬಿಎಂಪಿ ಮೂರು ವಲಯಗಳಲ್ಲಿ ಇ-ಖಾತಾ ಮೇಳ

Share It

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 3 ವಲಯಗಳಲ್ಲಿ ಇ-ಖಾತಾ ಮೇಳ ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಬಿಬಿಎಂಪಿಯು ನಾಗರಿಕರ ಅನುಕೂಲಕ್ಕಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ನಾಗರಿಕ ಗುಂಪುಗಳಲ್ಲಿ ಇ-ಖಾತಾ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ ಶನಿವಾರ ಮಹದೇವಪುರ, ಯಲಹಂಕ ಹಾಗು ಪಶ್ಚಿಮ ವಲಯ ಸೇರಿದಂತೆ 3 ವಲಯಗಳಲ್ಲಿ ಇ-ಖಾತಾ ಮೇಳ ನಡೆಸಲಾಯಿತು.

ನಗರದಲ್ಲಿ ಇ-ಖಾತಾ ವಿತರಣೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶದಿಂದ ಪಾಲಿಕೆಯ ವತಿಯಿಂದ ಹಾಗೂ ಯಾವುದೇ ಆಸಕ್ತ ನಾಗರಿಕ ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಾವೇ ತಮ್ಮ ಹತ್ತಿರದ ಪ್ರದೇಶಗಳಲ್ಲಿ ಇ-ಖಾತಾ ಮೇಳವನ್ನು ಆಯೋಜಿಸಬಹುದಾಗಿದ್ದು, ಅದಕ್ಕೆ ಬಿಬಿಎಂಪಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.

ಇ-ಖಾತಾ ಮೇಳವನ್ನು ಯಾವ ರೀತಿ ಪದ್ಧತಿಯಾಗಿ ಮತ್ತು ಸಂಘಟಿತ ರೀತಿಯಲ್ಲಿ ಮಾಡಬೇಕು, ಆಸ್ತಿ ಮಾಲೀಕರಿಂದ ಏನೆಲ್ಲಾ ದಾಖಲಾತಿಗಳಿರಬೇಕು ಎಂಬುದರ ವಿವರವಾದ ಕಾರ್ಯವಿಧಾನವನ್ನು ಕೂಡಾ ತಿಳಿಸಲಾಗಿತ್ತು. ಈ ಪೈಕಿ ಇಂದು 3 ವಲಯಗಳಲ್ಲಿ ಮೇಳವನ್ನು ಆಯೋಜಿಸಲಾಗಿತ್ತು. ಇನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿಯೂ ಹಂತ-ಹಂತವಾಗಿ ಇ-ಖಾತಾ ಮೇಳವನ್ನು ಆಯೋಜಿಸಿ ಸ್ವತ್ತಿನ ಮಾಲೀಕರಿಗೆ ಅಂತಿಮ ಇ-ಖಾತಾ ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಲಿದೆ.

ಮೂರೂ ವಲಯದ ಇ-ಖಾತಾ ಮೇಳದ ವಿವರ:

ಮಹದೇವಪುರ ವಲಯ– ಮೊದಲನೇ ಹಂತದಲ್ಲಿ ಕೆ.ಆರ್.ಪುರ ವ್ಯಾಪ್ತಿಗೆ ಬರುವ ಹೊರಮಾವು ಉಪವಿಭಾಗದ ಮಂತ್ರಿ ವೆಬ್ ಸಿಟಿ ಹೊರಮಾವಿನಲ್ಲಿ ಇ-ಖಾತಾ ಮೇಳ ಆಯೋಜಿಸಲಾಗಿತ್ತು. ಸುಮಾರು 550 ಸ್ವತ್ತಿನ ಮಾಲೀಕರು ಇ-ಆಸ್ತಿಯನ್ನು ಪಡೆಯಲು ಮೇಳದಲ್ಲಿ ಭಾಗವಹಿಸಿದ್ದರು. ಹೊರಮಾವು ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಮೌಲ್ಯ ಮಾಪಕರು ಕಂದಾಯ ಪರಿವೀಕ್ಷಕರು ಹಾಗೂ ಗಣಕಯಂತ್ರ ನಿರ್ವಾಹಕರು ಒಟ್ಟು 313 ಸ್ವತ್ತಿನ ಮಾಲೀಕರಿಗೆ ಮೇಳದಲ್ಲಿಯೇ ಯಶಸ್ವಿಯಾಗಿ ಅಂತಿಮ ಇ-ಖಾತಾವನ್ನು ವಿತರಿಸಲಾಗಿದೆ. 63 ಇ-ಖಾತಾ ತಿದ್ದುಪಡಿಗಳನ್ನು ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಮಾಡಿಕೊಡಲಾಗಿದೆ.

ಪಶ್ಚಿಮ ವಲಯ– ಗಾಂಧಿನಗರ ಉಪ ವಿಭಾಗ ಗೋಪಾಲಪುರದಲ್ಲಿ ಬರುವ ಪ್ರಸ್ಟೀಜ್ ವೆಸ್ಟ್ ವುಡ್ಸ್ ನಲ್ಲಿ ಇ-ಖಾತಾ ಮೇಳ ಆಯೋಜನೆ ಮಾಡಲಾಗಿತ್ತು. ಈ ವೇಳೆ 45 ಡ್ರಾಫ್ಟ್ ಡೌನ್ಲೋಡ್ ಮಾಡಿಕೊಡಲಾಗಿದ್ದು, 5 ಅಂತಿಮ ಇ-ಖಾತಾ ನೀಡಲಾಗಿದೆ. ಮೇಳಾದಲ್ಲಿ ಇ-ಖಾತಾ ಪಡೆಯುವ ಕುರಿತು ತರಬೇತಿ ಕೂಡಾ ನೀಡಲಾಗಿದೆ.

ಯಲಹಂಕ ವಲಯ- ವಿದ್ಯಾರಣ್ಯ ಉಪ ವಿಭಾಗ ಕುವೆಂಪುನಗರದಲ್ಲಿನ ಸಿಂಗಾಪುರ ಬಸ್ ನಿಲ್ದಾಣದ ಕಳೆದ 2 ದಿನಗಳಿಂದ ಇ-ಖಾತಾ ಮೇಳಾ ಆಯೋಜಿಸಲಾಗಿತ್ತು. 394 ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಬಂದಿದ್ದರು. ಈ ಪೈಕಿ ಎಲ್ಲರಿಗೂ ಡ್ರಾಪ್ಟ್ ಇ-ಖಾತಾ ನೀಡಿ, 300 ಅರ್ಜಿದಾರರಿಗೆ ಅಂತಿಮ ಇ-ಖಾತಾಗಳನ್ನು ನೀಡಲಾಗಿದೆ. ಇನ್ನುಳಿದ 94 ಅರ್ಜಿಗಳನ್ನು ಸಹಾಯಕ ಕಂದಾಯ ಅಧಿಕಾರಿ ಮುಖಾಂತರ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತ ಸ್ಥಿತಿಗತಿ:

* ವೆಬ್ ಸೈಟ್ ಗೆ ಭೇಟಿ ನೀಡಿರುವವರ ಸಂಖ್ಯೆ: 1.45 ಕೋಟಿ.

* ಕರಡು ಇ-ಖಾತಾ ಡೌನ್ಲೋಡ್ ಮಾಡಿರುವವರ ಸಂಖ್ಯೆ: 10.34 ಲಕ್ಷ

* ಅಂತಿಮ ಇ-ಖಾತಾಗಾಗಿ ಆನ್ ಲೈನ್ ನಲ್ಲಿ ನಮೂದಾಗಿರುವ ಸಂಖ್ಯೆ: 1.46 ಲಕ್ಷ

* ಅಂತಿಮ ಇ-ಖಾತಾ ಡೌನ್ಲೋಡ್ ಮಾಡಿಕೊಂಡಿರುವ ಸಂಖ್ಯೆ: 1.42 ಲಕ್ಷ


Share It

You cannot copy content of this page