ಬೆಂಗಳೂರು: ಪರೀಕ್ಷಾ ಅಕ್ರಮಗಳನ್ನು ತಡೆಯುವುದು ಹಾಗೂ ಪಾರದರ್ಶಕ ಪರೀಕ್ಷಾ ಪ್ರಕ್ರಿಯೆ ನಡೆಸಲು ಸೂಕ್ತ ಮಾರ್ಗಸೂಚಿ ಮತ್ತು ನಿಯಮಾವಳಿ ರೂಪಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಸಂಬಂಧ ಆನೇಕಲ್ ಮೂಲದ ಕಾನೂನು ವಿದ್ಯಾರ್ಥಿ ರಾಹುಲ್ ಹೆಚ್.ಎಂ. ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಹೊಸ ಮಾರ್ಗ ಸೂಚಿಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಬಾಡಿವೋರ್ನ್ ಕ್ಯಾಮರಾ ಧರಿಸಬೇಕು. ಪಾರದರ್ಶಕ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಅಂಶಗಳಿರಬೇಕು ಎಂದು ಪೀಠ ಸೂಚಿಸಿದೆ.
ಅಲ್ಲದೆ, ಪರೀಕ್ಷಾ ಪಾವಿತ್ರ್ಯತೆಯನ್ನು ಎತ್ತಿಹಿಡಿಯಬೇಕು, ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಅಕ್ರಮ ತಡೆಯಲು ಅಗತ್ಯ ನಿಯಮಗಳನ್ನು ರೂಪಿಸಬೇಕು. ಆ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ವೇದಿಕೆ ಕಲ್ಪಿಸಿಕೊಡಬೇಕು. ಹೊಸ ಮಾರ್ಗಸೂಚಿಗಳನ್ನು ವಿಶ್ವವಿದ್ಯಾಲಯದ ಜೊತೆ ಸಂಯೋಜನೆ ಹೊಂದಿರುವ ಎಲ್ಲಾ ಕಾನೂನು ಕಾಲೇಜುಗಳಲ್ಲಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಜೊತೆಗೆ, ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದು ಅತ್ಯಂತ ಗಂಭೀರ ವಿಷಯವಾಗಿದೆ. ಕೆಲ ವಿದ್ಯಾರ್ಥಿಗಳು ಅಕ್ರಮಗಳನ್ನು ಎಸಗಿ ಲಾಭ ಮಾಡಿಕೊಳ್ಳಲು ಯತ್ನಿಸುತ್ತಾರೆ. ಇದರಿಂದ ಇತರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಯಾವುದೇ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನಡುವೆ ಭಾರಿ ಸ್ಪರ್ಧೆ ಇರುತ್ತದೆ. ಹಾಗಾಗಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: 2024 ರ ಏಪ್ರಿಲ್‌ನಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ನಡೆದ ಕಾನೂನು ವಿವಿಯ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ರಾಹುಲ್ ಚೀಟಿ ಬಳಸಿ ಅಕ್ರಮ ಎಸಗಿದ್ದಾರೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಡಿಬಾರ್ ಮಾಡಿತ್ತು. ಈ ಕ್ರಮ ಪ್ರಶ್ನಿಸಿ ರಾಹುಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.