ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿದ 10 ದಿನಗಳ ತರುವಾಯ ಉಪ ವಿಭಾಗಾಧಿಕಾರಿಗಳು ಪತ್ರವನ್ನು ಅಂಗೀಕರಿಸಬೇಕು, ಅದಕ್ಕೂ ಮೊದಲೇ ಅಂಗೀಕರಿಸಿದ ರಾಜೀನಾಮೆ ಸಿಂಧುವಾಗುವುದಿಲ್ಲ. ಆ ಸಮಯದಲ್ಲಿ ರಾಜೀನಾಮೆ ಕುರಿತು ವಿಚಾರಣೆಯನ್ನು ಸಹ ನಡೆಸಬೇಕು ಎಂದು ಹೈಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಬೆಳಗಾವಿ ಜಿಲ್ಲೆಯ ಉಪವಿಭಾಗಾಧಿಕಾರಿಗಳು ರಾಜೀನಾಮೆಯನ್ನು ಅಂಗೀಕರಿಸಿ ನೀಡಿದ್ದ ಆದೇಶವನ್ನು ರದ್ದು ಮಾಡಿದೆ.
ಮಾಲ ಗೌಡ ಎನ್ನುವವರು ಬೆಳಗಾವಿ ಜಿಲ್ಲೆಯ ಅಥಣಿ ಕೊಹಾಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಉಪವಿಭಾಗಾಧಿಕಾರಿಗಳು ಯಾವುದೇ ನಿಯಮವನ್ನು ಪಾಲಿಸದೆ ಅಂಗೀಕರಿಸಿದ್ದಾರೆ ಎಂದು ಹೈಕೋರ್ಟ್ ನಲ್ಲಿ ದಾವೆಯನ್ನು ಹೂಡಿದ್ದರು, ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 48 ಅನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿಲ್ಲ. ಬೆದರಿಕೆ ಮತ್ತು ಒತ್ತಡ ಹೇರಲಾಗಿದೆಯೇ ಎನ್ನುವುದನ್ನು ಪರಿಗಣಿಸಿಲ್ಲ ಎಂದು ಹೇಳಿದೆ.
2024 ರ ಡಿಸೆಂಬರ್ 4 ರಂದು ಮಾಲ ಗೌಡ ಅವರು ತಮಗೆ ಇತರೆ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ತದನಂತರ ಡಿಸೆಂಬರ್ 16ರಂದು ತಾವು ನೀಡಿದ್ದ ರಾಜೀನಾಮೆಯನ್ನು ಹಿಂಪಡೆಯಬೇಕೆಂದು ಮತ್ತೊಂದು ಪತ್ರದ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಈಗಾಗಲೇ ರಾಜೀನಾಮೆಯನ್ನು ಅಂಗೀಕರಿಸಿ ಆದೇಶವನ್ನು ನೀಡಲಾಗಿದೆ ಎಂದು ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸೂಕ್ತ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕೆಂದು ಅರ್ಜಿದಾರರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯ ವೇಳೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 48(3) ರ ಪ್ರಕಾರ ರಾಜೀನಾಮೆ ಪತ್ರವನ್ನು ಹಿಂದಕ್ಕೆ ಪಡೆಯಲು 10 ದಿನಗಳ ಕಾಲಾವಕಾಶ ಇದೆ. ಡಿಸೆಂಬರ್ 14ರಂದು ಅರ್ಜಿಯನ್ನು ನನ್ನ ಕಕ್ಷಿದಾರರು ಸಲ್ಲಿಸಿದ್ದರು. ಆದರೆ ಅಂದು ಮತ್ತು ನಂತರದ ದಿನ ಎರಡನೆಯ ಶನಿವಾರ ಮತ್ತು ಭಾನುವಾರವಾಗಿದ್ದರಿಂದ ಸೋಮವಾರ ಅರ್ಜಿ ಪರಿಗಣನೆಗೆ ಒಳಪಟ್ಟಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದವನ್ನು ಮಂಡಿಸಿದ್ದರು. ಅದಕ್ಕೆ ತದ್ವಿರುದ್ಧವಾಗಿ ವಾದವನ್ನು ಮಂಡಿಸಿದ್ದ ಸರ್ಕಾರಿ ವಕೀಲರು 10 ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಆದ್ದರಿಂದ ಆದೇಶ ಸರಿಯಾಗಿದೆ ಎನ್ನುವ ವಾದವನ್ನು ಹೈ ಕೋರ್ಟ್ ನ್ಯಾಯಪೀಠದ ಮುಂದೆ ಇರಿಸಿದ್ದರು. ಆದರೆ ಅರ್ಜಿದಾರರ ಪರ ವಕೀಲರ ವಾದವನ್ನು ಮಾನ್ಯ ಮಾಡಿರುವ ನ್ಯಾಯಾಲಯ ರಾಜೀನಾಮೆ ಕುರಿತ ಉಪವಿಭಾಗಾಧಿಕಾರಿಗಳ ಅಂತಿಮ ಆದೇಶವನ್ನು ರದ್ದುಗೊಳಿಸಿದೆ.