ಬೆಂಗಳೂರು: ರಾಜ್ಯದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಡಿ ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಇ-ಕಾರ್ಮಿಕ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಲು ಕಾರ್ಮಿಕ ಇಲಾಖೆಯ ಆಯುಕ್ತರು ಕಟ್ಟಪ್ಪಣೆ ಹೊರಡಿಸಿದ್ದಾರೆ.
ನೋಂದಣಿ ಮಾಡಲು ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ನೌಕರರು ಇಲ್ಲದಿದ್ದರೆ ಶುಲ್ಕವಾಗಿ 405 ರೂ, 1 ರಿಂದ 9 ನೌಕರರಿದ್ದರೆ 810 ರೂ, 10 ರಿಂದ 19 ನೌಕರರಿದ್ದರೆ ರೂ 5400 ರೂ, 20 ರಿಂದ 49 ನೌಕರರಿದ್ದರೆ 13,500 ರೂ, 50 ರಿಂದ 99 ನೌಕರರಿದ್ದರೆ 27,000 ರೂ, 100 ರಿಂದ 250 ನೌಕರರಿದ್ದರೆ 54,000 ರೂ, 251 ರಿಂದ 500 ನೌಕರರಿದ್ದರೆ 67,500 ರೂ, 501 ರಿಂದ 1,000 ನೌಕರರಿದ್ದರೆ 94,500 ರೂ, 1,000 ಸಾವಿರಕ್ಕಿಂತ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದರೆ 1,01,250 ರೂ ಗಳನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ.
ಹೊಸ ನಿಯಮಗಳು ಏಪ್ರಿಲ್ ನಿಂದ ಜಾರಿ:
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ರ ಕಾರ್ಯವ್ಯಾಪ್ತಿ ಕರ್ನಾಟಕ ರಾಜ್ಯಾದ್ಯಂತ ಇದ್ದು, ಈ ಅಧಿಸೂಚನೆಯು 2025 ವರ್ಷದ ಜನವರಿ 1 ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಇದು ಈ ಹಿಂದೆ ಹೊರಡಿಸಲಾದ ಎಲ್ಲಾ ಅಧಿಸೂಚನೆಗಳ ಮುಂದುವರೆದ ಭಾಗವಾಗಿದ್ದು, ಅಧಿನಿಯಮದ ಹೊಸ ಉಪಬಂಧಗಳು ಈಗಾಗಲೇ ಜಾರಿಗೆ ಬಂದಿರುವ ಸ್ಥಳಗಳನ್ನು ಒಳಗೊಂಡಿದೆ. ಹೊಸ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ಮೂರು ತಿಂಗಳು ಅಂದರೆ 2025ರ ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಸ್ಥಳಗಳಲ್ಲಿ ಜಾರಿಗೆ ಬರಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಹೊಸ ನಿಯಮಗಳ ಪ್ರಕಾರ ಆನ್ ಲೈನ್ ಅರ್ಜಿಯನ್ನು ಜಾಲತಾಣ https://www.ekarmika.karnataka.gov.in/ekarmika/Static/Home.aspx ಮೂಲಕ ಸಲ್ಲಿಸಬಹುದಾಗಿದೆ. ಇದಕ್ಕೆ ಇಲಾಖೆಯ ಹಿರಿಯ ಕಾಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರು ನೋಂದಣಿ ಅಧಿಕಾರಿಗಳಾಗಿದ್ದಾರೆ. ಈ ಕುರಿತು ಹೆಲ್ಪ್ ಲೈನ್ ಸಂಖ್ಯೆಯಾದ 155214 ಹಾಗೂ ಇ-ಮೇಲ್ ekarmikalabour@gmail.com ಮೂಲಕ ಸಂಪರ್ಕಿಸಬಹುದಾಗಿದೆ.