ದೆಹಲಿ: ವಿವಾಹಿತ ಮಹಿಳೆ ತನ್ನ ಪತಿಯನ್ನು ಹೊರತುಪಡಿಸಿ ಬೇರೆ ಪುರುಷರ ಜೊತೆ ದೈಹಿಕ ಸಂಬಂಧ ಹೊಂದದೆ ಕೇವಲ ಪ್ರೀತಿ, ವಾತ್ಸಲ್ಯದ ಸಂಬಂಧವನ್ನು ಹೊಂದಿದ್ದರೆ ಅದು ವ್ಯಭಿಚಾರಕ್ಕೆ ಸಮನಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಹೆಂಡತಿಗೆ 4,000 ರೂಪಾಯಿ ಮಧ್ಯಂತರ ಜೀವನಾಂಶವನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಪ ವ್ಯಕ್ತಪಡಿಸಿದೆ.
ಹೈಕೋರ್ಟ್ ತನ್ನ ಆದೇಶದಲ್ಲಿ, ದೈಹಿಕ ಸಂಬಂಧ ಹೊಂದಿದರೆ ಮಾತ್ರ ಅದನ್ನು ಅಕ್ರಮ ಸಂಬಂಧ ಅಥವಾ ವ್ಯಭಿಚಾರ ಎಂದು ಕರೆಯಲು ಸಾಧ್ಯ. ಆಕೆ ಕೇವಲ ಪ್ರೀತಿ ಹೊಂದಿದ್ದರೆ ಅದನ್ನು ವ್ಯಭಿಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಗಂಡನ ಸಂಪಾದನೆ ಕಡಿಮೆ ಎಂಬ ಕಾರಣಕ್ಕೆ ಜೀವನಾಂಶವನ್ನು ನಿರಾಕರಿಸಲು ಮಾನದಂಡವಲ್ಲ. ಪತ್ನಿಯ ದೈನಂದಿನ ಅಗತ್ಯಗಳನ್ನು ಪೂರೈಸಲು ಸಮರ್ಥರಿಲ್ಲ ಎಂಬುದು ತಿಳಿದೂ ಯುವತಿಯನ್ನು ಮದುವೆಯಾದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಹೆಂಡತಿಯನ್ನು ನಿರ್ವಹಿಸಲು ಅಥವಾ ನಿರ್ವಹಣಾ ಮೊತ್ತವನ್ನು ಪಾವತಿಸಲು ಪತಿ ಸಂಪಾದಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಹೆಂಡತಿ ಬೇರೊಬ್ಬರನ್ನು ಪ್ರೀತಿಸುತ್ತಿರುವುದರಿಂದ ಆಕೆ ತನ್ನಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮಧ್ಯಪ್ರದೇಶ ಕೋರ್ಟ್ ಈ ತೀರ್ಪು ನೀಡಿದೆ.