ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆಬ್ರವರಿ 24ರವರೆಗೆ ವಿಸ್ತರಿಸಿದೆ.
ಈ ಮೊದಲು ಫೆಬ್ರವರಿ 18ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇತ್ತು, ಆದರೆ ದಿನಾಂಕ ವಿಸ್ತರಣೆಗೆ ಅನೇಕರು ಮನವಿ ಮಾಡಿದ್ದರ ಪರಿಣಾಮ ಈ ತೀರ್ಮಾನ ಮಾಡಲಾಗಿದೆ. ಶುಲ್ಕ ಕಟ್ಟಲು ಫೆಬ್ರವರಿ 25ರವರೆಗೆ ಅವಕಾಶ ಇರಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ನಡೆಯಲಿದ್ದು, ಅಷ್ಟರೊಳಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆ ಇದ್ದು, ಅದನ್ನು ತೆಗೆದುಕೊಂಡರೂ ರಾಜ್ಯದಲ್ಲಿನ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಪರೀಕ್ಷಾ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವವರು ಕೂಡ ತಮ್ಮ ಅರ್ಜಿಗಳಲ್ಲಿನ ಮಾಹಿತಿಯನ್ನು ಬದಲಿಸಬೇಕಿದ್ದರೂ ಲಾಗಿನ್ ಆಗಿ ಎಡಿಟ್ ಮಾಡಿಕೊಳ್ಳಬಹುದಾಗಿದೆ. ದಾಖಲೆಗಳ ಪರಿಶೀಲನೆ ಕಾಲೇಜು ಹಂತದಲ್ಲೇ ನಡೆಯಲಿದ್ದು, ಕ್ಲೇಮ್ ಗಳ ಪ್ರಕಾರ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ಹೋಗಬೇಕಿದೆ.
ಪಿಜಿ ಮೆಡಿಕಲ್ ಸೀಟು ರದ್ದತಿಗೆ ಆವಕಾಶ:
ಇನ್ನು ಪ್ರಾಧಿಕಾರದ ಮಾಹಿತಿಯಂತೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮಾಪ್ ಅಪ್ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ತಮ್ಮ ಸೀಟನ್ನು ರದ್ದುಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಫೆಬ್ರವರಿ 17ರೊಳಗೆ ಯಾವುದೇ ದಂಡ ಇಲ್ಲದೆ ರದ್ದುಪಡಿಸಿಕೊಳ್ಳಬಹುದಾಗಿದೆ. ಹೈಕೋರ್ಟ್ ಆದೇಶದ ಪ್ರಕಾರ ರದ್ದುಪಡಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ದಂಡ ವಿನಾಯಿತಿ ಕೂಡ ಕೊಡಲಾಗಿದೆ. ಮಾಪ್ ಅಪ್ ಸುತ್ತಿನಲ್ಲಿ ಸಿಕ್ಕ ಸೀಟನ್ನು ಈಗಾಗಲೇ ದಂಡ ಕಟ್ಟಿ ರದ್ದುಪಡಿಸಿಕೊಂಡಿದ್ದಲ್ಲಿ ಅಂತಹವರಿಗೆ ಮುಂದಿನ ದಿನಗಳಲ್ಲಿ ದಂಡದ ಮೊತ್ತವನ್ನು ಹಿಂದಿರುಗಿಸಲಾಗಲಿದೆ.
ಎಂ ಫಾರ್ಮಾ ಕೋರ್ಸ್‌ಗಳಿಗೆ ಪ್ರವೇಶ:
ಸರ್ಕಾರಿ ಔಷಧ ವಿಜ್ಞಾನ ಕಾಲೇಜಿನಲ್ಲಿ ಎಂ.ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕೆ ಐದು ಸೀಟುಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಆಫ್ಷನ್ ದಾಖಲಿಸಲು ಫೆಬ್ರವರಿ 17ರ ಬೆಳಿಗ್ಗೆ 9ರವರೆಗೆ ಅವಕಾಶ ನೀಡಲಾಗಿದೆ. ಅಂದೇ ಬೆಳಿಗ್ಗೆ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 2ರೊಳಗೆ ಶುಲ್ಕ ಪಾವತಿಸಿ ಕಾಲೇಜಿಗೆ ವರದಿ ಮಾಡಿಕೊಳ್ಳಬಹುದಾಗಿದೆ.