News

ಈ ಬಾರಿಯ ಎಸ್‌.ಎಸ್.ಎಲ್.ಸಿ ಪರೀಕ್ಷೆ ನಿರ್ಮಿಸಲಿದೆ ಹೊಸ ದಾಖಲೆ

Share It

ಬೆಂಗಳೂರು: ರಾಜ್ಯದಲ್ಲಿ 2024-25ನೇ ಸಾಲಿನ ಎಸ್‌.ಎಸ್.ಎಲ್.ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದು ಈವರೆಗಿನ ದಾಖಲೆಯಾಗಿದೆ.

ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯುವ ಎಸ್‌ಎಸ್ಎಲ್ ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಪೈಕಿ ಈ ಬಾರಿ 8,42,817 ಹೊಸ ವಿದ್ಯಾರ್ಥಿಗಳು, 38,091 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 15,539 ಖಾಸಗಿ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪ್ರಶ್ನೆ ಪತ್ರಿಕೆಗಳ ವಿತರಣೆಗೆ ಒಟ್ಟು 1,117 ವಿತರಣಾ ಮಾರ್ಗಗಳನ್ನು ಗುರುತಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು 2,818 ಜನ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು 958 ಜನ ಉಪ/ಜಂಟಿ ಮುಖ್ಯ ಅಧೀಕ್ಷಕರು, 2,818 ಜನ ಉತ್ತರ ಪತ್ರಿಕೆಗಳ ಮತ್ತು ಪ್ರಶ್ನೆ ಪತ್ರಿಕೆಗಳ ಪಾಲಕರು, 240 ಮೌಲ್ಯಮಾಪನ ಕೇಂದ್ರಗಳಿರಲಿವೆ. 65 ಸಾವಿರ ಶಿಕ್ಷಕರು ಈ ಬಾರಿ ಮೌಲ್ಯಮಾಪನ ಮಾಡಲಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಗೆ 7.13 ಲಕ್ಷ ವಿದ್ಯಾರ್ಥಿಗಳು ನೋಂದಣಿ:

ಮಾ.1ರಿಂದ 20ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 6,61,474 ಹೊಸ ವಿದ್ಯಾರ್ಥಿಗಳು: 34,071 ಮಂದಿ ಪುನರಾವರ್ತಿತ ಮತ್ತು 18,317 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 5 ಮಂದಿ ತೃತೀಯ ಲಿಂಗಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಬಾಲಕರು 3,35,468 ಮತ್ತು ಬಾಲಕಿಯರು 3,78,389 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಉಳಿದಂತೆ 2,91,959 ಜನ ವಿಜ್ಞಾನ, 2,29,308 ಜನ ವಾಣಿಜ್ಯ ಮತ್ತು 1,92,595 ಜನ ಕಲಾ ಸಂಯೋಜನೆಯಲ್ಲಿ ಪರೀಕ್ಷೆ ತಗೆದುಕೊಂಡಿದ್ದಾರೆ. ಪರೀಕ್ಷೆಗೆ ಒಟ್ಟು 1,171 ಪರೀಕ್ಷಾ ಕೇಂದ್ರಗಳಿರಲಿದ್ದು, 5,050 ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 76 ಮೌಲ್ಯ ಮಾಪನ ಕೇಂದ್ರಗಳಲ್ಲಿ 31 ಸಾವಿರ ಮೌಲ್ಯ ಮಾಪಕರು ಮೌಲ್ಯ ಮಾಪನ ಮಾಡಲಿದ್ದಾರೆ.

ಬಿಗಿ ಬಂದೋಬಸ್ತ್:

ದ್ವಿತೀಯ ಪಿಯು ಮತ್ತು ಎಸ್‌ಎಸ್‌ಎಲ್‌ಸಿ ಈ ಎರಡೂ ಪರೀಕ್ಷೆಗಳ ವೆಬ್ ಕಾಸ್ಟಿಂಗ್‌ನಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಪರಿಗಣಿಸಿ ಸೈಬರ್, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದ್ದು, ಪರೀಕ್ಷೆ ನಡೆಸಲು ಸೂಕ್ತ ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ.


Share It

You cannot copy content of this page