News

ಯಶಸ್ಸು ಕಂಡ ಬಿಬಿಎಂಪಿಯ “ನಮ್ಮ ರಸ್ತೆ 2025” ಕಾರ್ಯಕ್ರಮ

Share It

ಬೆಂಗಳೂರು: ಬಿಬಿಎಂಪಿ ಹಮ್ಮಿಕೊಂಡಿದ್ದ ಮೂರು ದಿನಗಳ “ನಮ್ಮ ರಸ್ತೆ-2025” ಕಾರ್ಯಗಾರ, ಪ್ರದರ್ಶನ ಹಾಗೂ ಸಮಾವೇಶ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ನಮ್ಮ ರಸ್ತೆ-2025 ಕಾರ್ಯಕ್ರಮ ಫೆಬ್ರವರಿ 20, 21 ಹಾಗೂ 22 ರಂದು ನಡೆಯಿತು. ಹಲವಾರು ವಿಷಯಗಳ ಕುರಿತು ಕಾರ್ಯಗಾರಗಳು, ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಿಬಿಎಂಪಿಯೊಂದಿಗೆ ಡಬ್ಲ್ಯೂ.ಆರ್.ಐ ಇಂಡಿಯಾ ಜ್ಞಾನ ಪಾಲುದಾರರಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಸಾವಿರಾರು ಸಾರ್ವಜನಿಕರು ವೀಕ್ಷಿಸಿದರು. ಸುಸ್ಥಿರ ನಗರ ಸಾರಿಗೆ ಪರಿಹಾರಗಳನ್ನು ಚರ್ಚಿಸಲು ಸರ್ಕಾರ ಮತ್ತು ನಾಗರಿಕ ಸಮಾಜ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ವೈವಿಧ್ಯಮಯ ನಾಗರಿಕರು ಮತ್ತು ಪಾಲುದಾರರು ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.

ಮೊದಲ ದಿನ:

ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ನಮ್ಮ ರಸ್ತೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಜೊತೆಗೆ, ನಗರದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಒಂದೇ ಮಾದರಿಯ ವಿನ್ಯಾಸ ಕಾಪಾಡುವ ನಿಟ್ಟಿನಲ್ಲಿ ರಚಿಸಿರುವ “ನಮ್ಮ ರಸ್ತೆ ಕೈಪಿಡಿ”ಯನ್ನು ಬಿಡುಗಡೆಗೊಳಿಸಿದ್ದರು.

ನಮ್ಮ ರಸ್ತೆ ಕೈಪಿಡಿಯಲ್ಲಿರುವ ಎಲ್ಲಾ ಅಂಶಗಳನ್ನು ಚಾಚು ತಪ್ಪದೆ ಪಾಲಿಸಿ ಅದನ್ನು ಅನುಷ್ಠಾನಕ್ಕೆ ತರುವುದು ಪ್ರಮುಖ ಉದ್ದೇಶವಾಗಿದೆ. ನಗರದ ಎಲ್ಲಾ ರಸ್ತೆಗಳು, ಪಾದಚಾರಿ ಮಾರ್ಗಗಳು ವಿನ್ಯಾಸಗಳು ಏಕರೂಪತೆಯಿಂದ ಇರಬೇಕೆಂಬುದರ ಕುರಿತು ಪ್ರಮಾಣಿತ ಕಾರ್ಯವಿಧಾನ(ಎಸ್.ಒ.ಪಿ) ಪ್ರಕಾರ ಕೈಪಿಡಿಯನ್ನು ಸಿದ್ದಪಡಿಸಲಾಗಿತ್ತು.

ಸುಸ್ಥಿರ ಸಾರಿಗೆ ಮತ್ತು ವಾಸಯೋಗ್ಯದ ಕುರಿತು, ಬೆಂಗಳೂರಿನ ಸಂಚಾರವನ್ನು ನಾವು ಹೇಗೆ ನಿರ್ವಹಿಸುವುದು, ಸಮೂಹ ಸಾರಿಗೆಗೆ ಉದ್ಯೋಗಗಳನ್ನು ಹತ್ತಿರ ತರುವುದರ ಕುರಿತು ನಡೆದ ಸಮಾವೇಶದಲ್ಲಿ ಸಾಕಷ್ಟು ಅಂಶಗಳನ್ನು ಚರ್ಚಿಸಲಾಯಿತು.

ಎರಡನೇ ದಿನ:

ಕಾರ್ಯಕ್ರಮದ 2ನೇ ದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಬೆಂಗಳೂರು ಎದುರಿಸುತ್ತಿರುವ ಸಂಚಾರ ಸಮಸ್ಯೆಗಳ ಕುರಿತು ಮಾತನಾಡಿದರು. ಜೊತೆಗೆ ನಗರದ ಚಲನಶೀಲತೆಯ ಸವಾಲುಗಳನ್ನು ಪರಿಹರಿಸಲು ಸಹಯೋಗದ ಮಹತ್ವವದ ಕುರಿತು ತಿಳಿಸಿದರು. ಬಿಬಿಎಂಪಿ ಎಂಜಿನಿಯರ್ಗಳ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ, ಉತ್ತಮ ಬೀದಿಗಳನ್ನು ನಿರ್ಮಿಸುವುದು, ಸಾರ್ವಜನಿಕ ಸಾರಿಗೆಯ ತಂತ್ರಜ್ಞಾನ ವಿಕಸನದ ಸಮಾವೇಶಗಳು ನಡೆಯಿತು.

ಮೂರನೇ ದಿನ:

ನಮ್ಮ ರಸ್ತೆ ಕಾರ್ಯಕ್ರಮದ ಮೂರನೇ ದಿನವಾದ ಇಂದು ಫ್ರೆಂಡ್ಸ್ ಆಫ್ ಬಿಎಂಟಿಸಿ ಆಯೋಜಿಸಿದ್ದ ‘ನಮ್ಮ ಬಸ್ಸು’ ಕುರಿತು ರಸಪ್ರಶ್ನೆ ನಡೆಯಿತು. ಇದರ ನಂತರ ಬೆಂಗಳೂರಿನ ಪಾದಚಾರಿ ಮಾರ್ಗಗಳ ಕುರಿತು ಆಕರ್ಷಕ ಚರ್ಚೆ ಆಯೋಜಿಸಲಾಗಿತ್ತು, ನಗರದಲ್ಲಿ ನಡೆಯುವ ಸುಲಭತೆಯನ್ನು ಹೆಚ್ಚಿಸಲು ಮತ್ತು ಸುರಕ್ಷಿತ ಪಾದಚಾರಿ ಮೂಲಸೌಕರ್ಯವನ್ನು ಕಲ್ಪಿಸುವ ಕುರಿತು ಮಾತುಕತೆ ಇತ್ತು.

70ಕ್ಕೂ ಹೆಚ್ಚು ಭಾಷಣಕಾರರಿಂದ ಭಾಷಣ:

ಒಟ್ಟು ಮೂರು ದಿನಗಳ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಭಾಷಣಕಾರರು, 68 ಸರ್ಕಾರಿ ಮತ್ತು ಪಾಲುದಾರ ಸಂಸ್ಥೆಗಳು, 16ಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳು, ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಭಾಗವಹಿಸಿ ಪ್ರಮುಖವಾಗಿ ನಗರದ ಚಲನಶೀಲತೆಯ ಸವಾಲುಗಳು ಮತ್ತು ಪರಿಹಾರಗಳ ಕುರಿತು ಜಾಗೃತಿ ಮೂಡಿಸುವ ಕುರಿತು ಸಂವಾದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.


Share It

You cannot copy content of this page