ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ ಫೆ.27ರಿಂದ ಮಾ.3ರವರೆಗೆ ಪುಸ್ತಕ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಅದರಲ್ಲಿ ನಾಲ್ಕು ದಿನಗಳ ಕಾಲ ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಫೆ.27 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಸ್ತಕ ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಹಾಗೂ ಸಾಹಿತಿಗಳು ಪುಸ್ತಕ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಮತ್ತು ಸಾಹಿತಿ ದಾಮೋದರ್ ಮೌಜು ಕೂಡ ಭಾಗಿಯಾಗುತ್ತಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಗೆ ಮನರಂಜನಾ ಕಾರ್ಯಕ್ರಮವೂ ಸಹ ಇರಲಿದೆ.
ಮಾ.2ರ ಭಾನುವಾರದಂದು ಖ್ಯಾತ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ ನೇತೃತ್ವದಲ್ಲಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಪುಸ್ತಕ ಬಿಡುಗಡೆಗೂ ಅವಕಾಶ ಕಲ್ಪಿಸಲಾಗಿದೆ. ಹೊಸ ಪುಸ್ತಕ ಬಿಡುಗಡೆ ಮಾಡುವ ಎಲ್ಲರಿಗೂ ಸೇರಿ ಒಂದು ಮಳಿಗೆಯನ್ನು ಮೀಸಲಿಡಲಾಗಿದೆ. ಬ್ಯಾರಿ, ತುಳು, ಕೊಂಕಣಿ, ಕನ್ನಡ ಅಕಾಡೆಮಿಗೂ ಒಂದೊಂದು ಸ್ಟಾಲ್ ಅನ್ನು ಮೀಸಲಿರಿಸಲಾಗಿದೆ. ಆದರೆ, ಪುಸ್ತಕ ಮೇಳದ ಕೊನೆಯ ದಿನ ಮಾ.3ರಂದು ಅಧಿವೇಶನ ಇರುವ ಕಾರಣ ಭದ್ರತೆಯ ಕಾರಣದಿಂದಾಗಿ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ನಿರ್ಭಂದ ವಿಧಿಸಲಾಗಿದೆ.