ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ಬೆಂಗಳೂರು: ದೇಹದಲ್ಲಿ ಶಕ್ತಿ ಇದ್ದಾಗ ದುಡಿಸಿಕೊಂಡು ಇಳಿವಯಸ್ಸಿನಲ್ಲಿ ಅವರನ್ನು ಕೈಬಿಟ್ಟರೆ ಸರ್ಕಾರಕ್ಕೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಹೈಕೋರ್ಟ್, ಇಬ್ಬರು ದಿನಗೂಲಿ ನೌಕರರನ್ನು ಕಾಯಂಗೊಳಿಸುವಂತೆ ಆದೇಶಿಸಿದೆ. ಅಲ್ಲದೇ, 10 ವರ್ಷ ಕೆಲಸ ಮಾಡಿರುವ ನೌಕರರನ್ನು ಕಾಯಂಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಸೂಚಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಸಾಕ್ಷರತಾ ಸಹಾಯಕರಾಗಿ ಕಳೆದ ಮೂರು ದಶಕಗಳಿಗಿಂತ ಅಧಿಕ ಸಮಯದಿಂದ ದುಡಿಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆನಂದು ಮತ್ತು ಈಶ್ವರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಹತ್ವದ ಹಾಗೂ ದೂರಗಾಮಿ ಪರಿಣಾಮವುಳ್ಳ ತೀರ್ಪು ನೀಡಿದೆ
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರರು ತಾವು ಯುವಕರಾಗಿದ್ದಾಗಿನಿಂದ ಈವರೆಗೂ ದಿನಗೂಲಿ ನೌಕರರಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಒಬ್ಬರು 39 ವರ್ಷ ಇಲಾಖೆಗೆ ದುಡಿದಿದ್ದು 58 ವರ್ಷ ತಲುಪಿದ್ದಾರೆ. ಇನ್ನೂಬ್ಬರು 32 ವರ್ಷ ಸೇವೆ ಸಲ್ಲಿಸಿ 54 ವರ್ಷ ತಲುಪಿದ್ದಾರೆ. ಯುವಕರಿದ್ದಾಗ ಭವಿಷ್ಯದ ಬಗ್ಗೆ ಚಿಂತಿಸದೇ ದುಡಿದಿರುವ ಇವರೀಗ ಇಳಿವಯಸ್ಸಿಗೆ ಹತ್ತಿರವಾಗುತ್ತಿದ್ದು, ಇವರನ್ನು ಕಾಯಂಗೊಳಿಸದಿದ್ದರೆ ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಲಿದೆ. ಸರ್ಕಾರಕ್ಕಾಗಿ ಸುಧೀರ್ಘ ಸೇವೆ ಸಲ್ಲಿಸಿದವರನ್ನು ಕೊನೆಯ ದಿನಗಳಲ್ಲಿ ಜೀವನೋಪಾಯಕ್ಕೆ ಅಲೆಯುವಂತೆ ಮಾಡಬಾರದು ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
ಅಲ್ಲದೇ, ಇಂತಹ ಶೋಷಣೆಗಳನ್ನು ನಿಯಂತ್ರಿಸುವ ಅಗತ್ಯವಿದೆ. ಒಂದು ವೇಳೆ ಅರ್ಜಿದಾರರ ಮನವಿ ಪರಿಗಣಿಸದೇ ಹೋದರೆ ಮತ್ತೊಂದು ಸುತ್ತಿನ ಕಾನೂನು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರನ್ನು ಅವರು 10 ವರ್ಷಗಳ ಸೇವೆ ಪೂರೈಸಿದ ದಿನದಿಂದ ಅನ್ವಯಿಸುವಂತೆ ಕಾಯಂಗೊಳಿಸಬೇಕು ಮತ್ತು ವೇತನ ನಿಗದಿಪಡಿಸಬೇಕು. 12 ವಾರಗಳಲ್ಲಿ ರಾಜ್ಯ ಸರ್ಕಾರ ಈ ಆದೇಶ ಜಾರಿ ಮಾಡಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಉತ್ತರ ಕನ್ನಡ ಜಿಲ್ಲೆಯ ಆನಂದ್ ಎಂಬುವರು 1986ರ ಆ.12ರಂದು ಮತ್ತು ಈಶ್ವರ್ ಎಂಬುವರು 1993ರ ಸೆ.6ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಿರಿಯ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ದಿನಗೂಲಿ ಆಧಾರದಲ್ಲಿ ನೇಮಕವಾಗಿದ್ದ ಇವರನ್ನು 10 ವರ್ಷ ಸೇವಾವಧಿ ಪೂರೈಸಿದ ನಂತರವೂ ಕಾಯಂ ಮಾಡಿಕೊಳ್ಳಲು ಇಲಾಖೆ ನಿರಾಕರಿಸಿತ್ತು. ತಮ್ಮ ಸೇವೆ ಕಾಯಂಗೊಳಿಸುವಂತೆ ಕೋರಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. 2023ರಲ್ಲಿ ಮತ್ತೆ ಮನವಿ ಸಲ್ಲಿಸಿದ್ದಾಗ ಸಹಾಯಕ ಕಾರ್ಯಕಾರಿ ಎಂಜಿನಿಯರ್, ಅರ್ಜಿದಾರರಿಬ್ಬರೂ 30 ವರ್ಷಕ್ಕೂ ಅಧಿಕ ಸಮಯದಿಂದ ಸೇವೆ ಸಲ್ಲಿಸಿರುವ ಕಾರಣ ಅವರ ಸೇವೆ ಕಾಯಂ ಮಾಡಬಹುದು ಎಂದು ಶಿಫಾರಸು ಮಾಡಿದ್ದರು. ಆದರೆ ಹಿರಿಯ ಅಧಿಕಾರಿಗಳು ಯಾವ ಅದೇಶ ಹೊರಡಿಸದೇ ಇದ್ದುದರಿಂದ ಅರ್ಜಿದಾರರು ಬೇರೆ ದಾರಿ ಕಾಣದೆ ಹೈಕೋರ್ಟ್ ಮೊರೆ ಹೋಗಿದ್ದರು.
(WRIT PETITION No.100556 OF 2024 (S-RES)