News

ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ- ಬೆಂಗಳೂರು ವಿವಿ ಒಪ್ಪಂದ; ಶೈಕ್ಷಣಿಕ ವಲಯದ ಹೊಸ ಆಯಾಮಕ್ಕೆ ನಾಂದಿ

Share It

ಬೆಂಗಳೂರು: ಕೇಂದ್ರ ಸಾಂಸ್ಥಿಕ ವ್ಯವಹಾರಗಳ ವ್ಯಾಪ್ತಿಗೆ ಒಳಪಡುವ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ– ಬೆಂಗಳೂರು ಚಾಪ್ಟರ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಶಿಕ್ಷಣದಲ್ಲಿ ಸಹಭಾಗಿತ್ವ ಹೊಂದಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಶೈಕ್ಷಣಿಕವಾಗಿ ಪರಸ್ಪರ ಸಹಕಾರ, ಪಠ್ಯವನ್ನು ಮೇಲ್ದರ್ಜೆಗೇರಿಸುವ, ಕೈಗಾರಿಕಾ ಪಾಲುದಾರಿಕೆ ಹೊಂದುವ ಕುರಿತಂತೆ ವಿಸ್ತೃತ ಫಲಪ್ರದ ಮಾತುಕತೆ ನಡೆಸಲಾಗಿದೆ. ಬೆಂಗಳೂರು ವಿವಿ ವ್ಯಾಪ್ತಿಯ 298 ಕಾಲೇಜುಗಳು ಮತ್ತು ಐಸಿಎಸ್ಐಗೆ ಅನುಕೂಲವಾಗಲಿದೆ. ಇದರಿಂದ ಶೈಕ್ಷಣಿಕ ವಲಯದಲ್ಲಿ ಹೊಸ ಆಯಾಮಕ್ಕೆ ಇದೀಗ ವೇದಿಕೆ ಸಜ್ಜಾಗಿದೆ.

ಕರ್ನಾಟಕದಲ್ಲಿ ಒಟ್ಟು 12,170 ಮಂದಿ ವಿದ್ಯಾರ್ಥಿಗಳು ಕಂಪೆನಿ ಸೆಕ್ರೇಟರಿ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದ್ದು, ಬೆಂಗಳೂರಿನ ಭಾರತೀಯ ಆಡಳಿತ ಮಂಡಳಿ– ಐಐಎಂ, ಕ್ರೈಸ್ಟ್ ವಿವಿ ಜೊತೆಯೂ ಐಸಿಎಸ್ಐ ಸಹಭಾಗಿತ್ವ ಹೊಂದಿದೆ. ಸಂಸ್ಚಧೆ ಟುವಟಿಕೆಯಡಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಸೈನಿಕರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, 2017 ರಿಂದ ಇದಕ್ಕಾಗಿ 41 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ವಿಶೇಷ ಚೇತನರಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಸಿಎಸ್ ಕೋರ್ಸ್ ಗಳಿಗೆ ವ್ಯಾಪಕ ಬೇಡಿಕೆ ಇದ್ದು, ಬರುವ 2030 ರ ವೇಳೆಗೆ 30 ಸಾವಿರ ಹೆಚ್ಚುವರಿ ಹುದ್ದೆಗಳು ಸೃಜನೆಯಾಗಲಿವೆ.

ಸಿಎಸ್ ಕೋರ್ಸ್ ಗಳನ್ನು ಪೂರ್ಣಗೊಳಿಸಿದವರು, 24 ತಿಂಗಳು ಕಠಿಣ ತರಬೇತಿ ಪಡೆಯಬೇಕಾಗುತ್ತದೆ. ಇದರಿಂದ ಪ್ರಾಯೋಗಿಕವಾಗಿ ಕೆಲಸದ ಅನುಭವ ಪಡೆಯಲು ಸಹಕಾರಿಯಾಗಲಿದೆ. ತರಬೇತಿ ಪಡೆಯುವವರಿಗೆ ಗರಿಷ್ಠ 10 ಸಾವಿರ ರೂಪಾಯಿ ಶಿಷ್ಯ ವೇತನ ನೀಡಲಾಗುತ್ತದೆ. ಕಂಪೆನಿ ಸೆಕ್ರೇಟರೀಸ್ ಕೋರ್ಸ್ ಗಳಿಗೆ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಪ್ರಾಧಿಕಾರ ಮತ್ತು ಸೆಬಿ ಕೂಡ ಮಾನ್ಯತೆ ನೀಡಿದ್ದು, ಕಾರ್ಪೋರೇಟ್ ವಲಯದಲ್ಲಿ ಈ ಕೋರ್ಸ್ ಗಳು ಹೊಸ ಸ್ವರೂಪ ಪಡೆದುಕೊಂಡಿವೆ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಬೆಂಗಳೂರಿನ ಮೂರು ಮಂದಿ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.


Share It

You cannot copy content of this page