ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1 ನಾಳೆಯಿಂದ ಆರಂಭಗೊಳ್ಳಲಿದೆ. ಈ ಪರೀಕ್ಷೆ ಮಾ 20ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ತಡೆಗಟ್ಟಲು ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಕಡ್ಡಾಯಗೊಳಿಸಿರುವುದು ವಿಶೇಷವಾಗಿದೆ.
ಪಿಯುಸಿ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು. ನೋಂದಾಯಿಸಿಕೊಂಡಿದ್ದಾರೆ. ಮೊದಲ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕನ್ನಡ, ಅರಬಿಕ್ ಪರೀಕ್ಷೆ ನಿಗದಿಯಾಗಿದೆ. 80 ಅಂಕಗಳ ಪರೀಕ್ಷೆ ಇದಾಗಿದೆ. ರಾಜ್ಯದಲ್ಲಿ ಈ ಬಾರಿ 1,171 ಪರೀಕ್ಷಾ ಕೇಂದ್ರಗಳಿದ್ದು, 2,342 ಸ್ಥಾನಿಕ ಜಾಗೃತ ದಳಗಳು, 504 ವಿಚಕ್ಷಣ ಜಾಗೃತ ದಳ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪ, ಜಂಟಿ ಮುಖ್ಯ ಅಧೀಕ್ಷಕರು, ಉತ್ತರ ಪತ್ರಿಕೆಗಳ, ಪ್ರಶ್ನೆ ಪತ್ರಿಕೆಗಳ ಪಾಲಕರು ಕರ್ತವ್ಯನಿರ್ವಹಿಸಲಿದ್ದಾರೆ.
ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 6,61,474 ಹೊಸ ವಿದ್ಯಾರ್ಥಿಗಳು; 34,071 ಮಂದಿ ಪುನರಾವರ್ತಿತ ಮತ್ತು 18,317 ಖಾಸಗಿ ಅಭ್ಯರ್ಥಿಗಳುಪರೀಕ್ಷೆ ಬರೆಯಲಿದ್ದಾರೆ. 5 ಮಂದಿ ತೃತೀಯ ಲಿಂಗಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.
3,35,468 ಬಾಲಕರು ಮತ್ತು 3,78,389 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. 2,91,959 ವಿಜ್ಞಾನ ವಿದ್ಯಾರ್ಥಿಗಳು, 2,29,308 ವಾಣಿಜ್ಯ ಮತ್ತು 1,92,595 ಜನ ಕಲಾ ವಿಭಾಗದ ಪರೀಕ್ಷೆ ಬರೆಯಲಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿಗಮದ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ, ಹೋಗುವಾಗ ಮತ್ತು ಹಿಂದಿರುಗುವಾಗ ನಿಗಮದ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಪರೀಕ್ಷೆಯ ಪ್ರವೇಶ ಪತ್ರ ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.