ಬೆಂಗಳೂರು: ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(ಎಂಒಎಚ್ ಯುಎ) ಸ್ವಚ್ಛ ಸರ್ವೇಕ್ಷಣೆಯನ್ನು ನಡೆಸುತ್ತಿದ್ದು, ಇದು ಕಳೆದ ಫೆ.15 ರಿಂದ ಮಾ.31 ರವರೆಗೆ ನಮ್ಮ ದೇಶದಾದ್ಯಂತ ಇರುವಂತ ಎಲ್ಲ ನಗರಗಳಲ್ಲಿಯೂ ಆಯೋಜಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯ ವತಿಯಿಂದ ವಾರ್ಷಿಕವಾಗಿ ಕೈಗೊಳ್ಳಲಾಗುತ್ತಿರುವ ದೇಶದ ಅತೀದೊಡ್ಡ ಸ್ವಚ್ಚತೆಯ ಸಮೀಕ್ಷೆಯಾದ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಗರದ ಕುರಿತು ಸಾರ್ವಜನಿಕರ ಅಭಿಪ್ರಾಯಗಳನ್ನು ವಿವಿಧ ವೇದಿಕೆಗಳಿಂದ ಪ್ರತಿವರ್ಷದಂತೆ ಈ ವರ್ಷ ಕೂಡ ಸಂಗ್ರಹಿಸಲಾಗುತ್ತಿದೆ.
ಸ್ವಚ್ಛ ಸರ್ವೇಕ್ಷಣ್ 2024ರ ಒಂದು ಪ್ರಮುಖ ಅಂಶವೆಂದರೆ ನಗರದಲ್ಲಿ ಮತ್ತು ನಿರ್ದಿಷ್ಟವಾಗಿ ನಿಮ್ಮ ನೆರೆಹೊರೆಯಲ್ಲಿ ಸ್ವಚ್ಛತೆಯನ್ನು ಸಾಧಿಸುವಲ್ಲಿ ನಿಮ್ಮ ನಗರವು ಸಾಧಿಸಿದ ಪ್ರಗತಿಯ ಕುರಿತು ಪ್ರತಿಕ್ರಿಯೆಯನ್ನು ಪಡೆಯುವುದಾಗಿರುತ್ತದೆ. ಪ್ರಸ್ತುತ ಸಾಲಿನ ಸ್ವಚ್ಛ ಸರ್ವೇಕ್ಷಣ್-2024ರ ಸಮೀಕ್ಷೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಅದರಂತೆ, ವೆಬ್ ಲಿಂಕ್ https://sbmurban.org/feedback ಹಾಗೂ ಮೊಬೈಲ್ ಅಪ್ಲಿಕೇಶನ್ ಲಿಂಕ್ Swachhata-MOHUA ಮತ್ತು SS2024 VoteForYourCity ಗಳ ಮೂಲಕ ನಗರದ ಎಲ್ಲ ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದಾಗಿದೆ.
ಸ್ವಚ್ಛ ಸರ್ವೇಕ್ಷಣ್-2024 ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದ್ದು, ನಮ್ಮ ನಗರದ ಸ್ವಚ್ಛತೆಯ ಗುಣಮಟ್ಟವನ್ನು ಸುಧಾರಿಸಲು ನಾಗರಿಕರ ಭಾಗವಹಿಸುವಿಕೆ ಅತಿಮುಖ್ಯವಾಗಿದೆ ಎಂದು ಬೆಂಗಳೂರು ನಗರದ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ನೋಡಲ್ ಅಧಿಕಾರಿ ಡಾ.ಕೆ. ಹರೀಶ್ ಕುಮಾರ್ ಹೇಳಿದ್ದಾರೆ.