ಬೆಂಗಳೂರು: ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಹಲವು ತೊಂದರೆಗಳನ್ನು ಎದುರಿಸಿದ್ದ 67 ವರ್ಷದ ಹಿರಿಯ ವ್ಯಕ್ತಿಯೊಬ್ಬರಿಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಆದೇಶಿಸಿದೆ.
ವಿಜಯನಗರದ ಎಂಸಿ ಲೇಔಟ್ ನಿವಾಸಿ ಭಗವದಾಸ್ ಆಳ್ವ ಅವರು 2022ರ ಆಗಸ್ಟ್ 29 ರಂದು ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದ್ದರು. ಆದರೆ ಮುಂಬರುವ ಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿರಲ್ಲಿಲ್ಲ.
ಶಸ್ತ್ರಚಿಕಿತ್ಸೆಯ ನಂತರ ಆಳ್ವಾ ಅವರಿಗೆ ಸತತ ನೋವು ಕಾಣಿಸಿಕೊಂಡಿತು, ಇದರ ತರುವಾಯ ಮೂರನೇ ದಿನ ಅವರಿಗೆ ಘನ ಆಹಾರವನ್ನು ನೀಡಲಾಯಿತು. ಅವರ ಸ್ಥಿತಿ ಹದಗೆಟ್ಟು ಹೊಟ್ಟೆಯಲ್ಲಿ ಮತ್ತಷ್ಟು ಹಿಗ್ಗುವಿಕೆ ಉಂಟಾದಾಗ ವೈದ್ಯರು ಘನ ಆಹಾರವನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದರು. ನಂತರ ವೈದ್ಯರು ಎರಡನೇ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದ್ದರು. ಈ ಸಮಯದಲ್ಲಿ ನರ್ಸಿಂಗ್ ಸಿಬ್ಬಂದಿಗಳು ಅವರ ಅಂಗೈಯಿಂದ ಬಲವಂತವಾಗಿ ಸಿರಿಂಜ್ ಅನ್ನು ಹೊರತೆಗೆದಿದ್ದಾರೆ. ಇದರಿಂದಾಗಿ ಊತ ಉಂಟಾಗಿ, ಹೆಚ್ಚಿನ ಇಂಜೆಕ್ಷನ್‌ಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಎಲ್ಲ ಅವಾಂತರಗಳ ನಂತರ ಆಳ್ವಾ ಅವರನ್ನು ಸೆಪ್ಟೆಂಬರ್ 12 ರಂದು ಡಿಸ್ಚಾರ್ಜ್ ಮಾಡಲಾಗಿತ್ತು.
ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ಆಳ್ವಾ ಅವರಿಗೆ ಮೊದಲಿಗೆ 9.9 ಲಕ್ಷ ರೂ. ಬಿಲ್ ನೀಡಲಾಗಿತ್ತು, ಬಿಲ್ ಪಾವತಿಸಲು ನಿರಾಕರಿಸಿದ ನಂತರ ಅದನ್ನು 5.8 ಲಕ್ಷ ರೂ.ಗೆ ಇಳಿಸಲಾಗಿತ್ತು. ಕಿರುಕುಳ ಮತ್ತು ಆರ್ಥಿಕ ಹೊರೆಯ ಆರೋಪವನ್ನು ಆಸ್ಪತ್ರೆಯ ಮೇಲೆ ಹೊರಸಿದ್ದ ಆಳ್ವಾ ಅವರು ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಆಸ್ಪತ್ರೆಯು ತನ್ನ ಸಿಬ್ಬಂದಿಯ ವರ್ತನೆ ಮತ್ತು ಅವರು ಆಳ್ವಾ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಏನನ್ನೂ ಹೇಳಿಲ್ಲ. ದೂರುದಾರರು ಆಸ್ಪತ್ರೆ ಸಿಬ್ಬಂದಿಯ ವಿಚಿತ್ರ ವರ್ತನೆಯಿಂದಾಗಿ ಅನುಭವಿಸಿದ ಕಿರುಕುಳದ ಬಗ್ಗೆ ಮಾತನಾಡಲು ಸಮರ್ಥ ವ್ಯಕ್ತಿಯಾಗಿದ್ದಾರೆ ಎಂದು ಆಯೋಗ ಆದೇಶದಲ್ಲಿ ತಿಳಿಸಿ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೇಳಿದೆ.